ಮುಸುಕುಧಾರಿ ಇಬ್ಬರಿಂದ ಬಂಗಾರ–ಬೆಳ್ಳಿ ದೋಚಾಟ, ಯುವಕನ ಕಾಲಿಗೆ ಗುಂಡು
ವಿಜಯಪುರ (ಚಡಚಣ): ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಸೋಮವಾರ ಸಂಜೆ ಸಂಚಲನ ಮೂಡಿಸಿದ ಘಟನೆ ನಡೆದಿದೆ. ಗ್ರಾಮದ ಮಹಾರೋದ್ರ ಕಾಂಚಾಗಾರ ಎಂಬುವರಿಗೆ ಸೇರಿದ ಬಂಗಾರದ ಅಂಗಡಿಗೆ ಮುಸುಕುಧಾರಿ ಇಬ್ಬರು ಬೈಕ್‌ನಲ್ಲಿ ಬಂದು ಗುಂಡಿನ ದರೋಡೆ ನಡೆಸಿದ್ದಾರೆ. ಅಂಗಡಿಯಲ್ಲಿದ್ದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆ ವೇಳೆ ಆತ್ಮಲಿಂಗ ಸಂಗಪ್ಪ ಹೂಗಾರ (18) ಎಂಬ ಯುವಕನ ಬಲಗಾಲಿಗೆ ಗುಂಡು ತಗುಲಿದೆ. ತಕ್ಷಣ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಬಿ.ಎಲ್.ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದು ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 400 ಕೋಟಿ ಪ್ರಕರಣ ಕೇಂದ್ರ ಸರ್ಕಾರದಿಂದಲೇ ತನಿಖೆ ಆಗಲಿ
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮುಸುಕುಧಾರಿಗಳು ಅಂಗಡಿಗೆ ನುಗ್ಗಿ ಗನ್ ತೋರಿಸಿ ಭಯಭೀತಗೊಳಿಸಿ ದೋಚಾಟ ನಡೆಸಿದ್ದಾರೆ. ದರೋಡೆ ಬಳಿಕ ವೇಗವಾಗಿ ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ, ತನಿಖೆ ಚುರುಕು: ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಸಿಪಿಐ ಪರಸುರಾಮ ಮನಗೂಳಿ, ಝಳಕಿ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ತಿರಕನ್ನವರ, ಚಡಚಣ ಪಿಎಸ್ಐ ಸೋಮೇಶ್ ಗೆಜ್ಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಉಡುಪಿ: ಪ್ರವಾಸಿಗರ ದೋಣಿ ದುರಂತ – ಇಬ್ಬರ ಸಾವು
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ಶಂಕಿತರ ಚಲನವಲನ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಗುಂಡಿನ ದರೋಡೆ ನಡೆದಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.























