ಕಾಂಗ್ರೆಸ್ ಸುಳ್ಳಿನ ಮೇಲೆ ಸರ್ಕಾರ ನಡೆಸುತ್ತಿದೆ – ಸಿಎಂ ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
ಯಾದಗಿರಿ: ಕಾಂಗ್ರೆಸ್ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಸುಳ್ಳಿನ ಸರದಾರರು” ಎಂದು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರವಾಗಿ ವಾಗ್ದಾಳಿ ನಡೆಸಿದರು. ರಾಜ್ಯವನ್ನು ಲೂಟಿ ಹೊಡೆದು ಸರ್ಕಾರ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಮಹಾರಾಷ್ಟ್ರ ಗಡಿ ಭಾಗದಲ್ಲಿ ಬೆಳಕಿಗೆ ಬಂದಿರುವ ಸುಮಾರು 400 ಕೋಟಿ ರೂಪಾಯಿ ಹಗರಣದ ಹಿಂದೆ ರಾಜ್ಯದ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ: 400 ಕೋಟಿ ಪ್ರಕರಣ ಕೇಂದ್ರ ಸರ್ಕಾರದಿಂದಲೇ ತನಿಖೆ ಆಗಲಿ
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ, ಕರ್ನಾಟಕದ ಕಾಂಗ್ರೆಸ್ ನಾಯಕರ ಪ್ರಾಬಲ್ಯ ಮತ್ತು ಲೂಟಿತನದಿಂದಾಗಿ ಅವರ ಪ್ರಭಾವ ಮಹಾರಾಷ್ಟ್ರದವರೆಗೂ ವಿಸ್ತರಿಸಿರುವುದು ದುರದೃಷ್ಟಕರ ಬೆಳವಣಿಗೆ ಎಂದರು.
“ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮಾತ್ರವಲ್ಲ, ಪಕ್ಕದ ರಾಜ್ಯಗಳವರೆಗೂ ತನ್ನ ಲೂಟಿತನದ ಅಜಾನುಭಾವು ಚಾಚಿಕೊಂಡಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಾದ ಸ್ಥಿತಿ” ಎಂದು ಅವರು ಹೇಳಿದರು. ಇಂತಹ ಬೆಳವಣಿಗೆಗಳಿಂದಾಗಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಜನಸಾಮಾನ್ಯರು ಕಾಂಗ್ರೆಸ್ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: ಉಡುಪಿ: ಪ್ರವಾಸಿಗರ ದೋಣಿ ದುರಂತ – ಇಬ್ಬರ ಸಾವು
ಬಿಜೆಪಿ–ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, “ಮೈತ್ರಿ ಮುಂದಿನ ದಿನಗಳಲ್ಲಿ ನಡೆಯುವ ರಾಜಕೀಯ ಬೆಳವಣಿಗೆ. ಆದರೆ ಒಂದು ವಿಷಯ ಸ್ಪಷ್ಟ – ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ಆಡಳಿತ ಶೈಲಿ ಮತ್ತು ಹಗರಣಗಳಿಂದಾಗಿ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಹಗರಣಗಳು ಮತ್ತು ಆಡಳಿತ ವೈಫಲ್ಯಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಜನತೆಗೆ ಸ್ಪಷ್ಟ ಉತ್ತರ ನೀಡಬೇಕೆಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.























