Home Advertisement
Home ನಮ್ಮ ಜಿಲ್ಲೆ ಉಡುಪಿ ಉಡುಪಿ: ಪ್ರವಾಸಿಗರ ದೋಣಿ ದುರಂತ – ಇಬ್ಬರ ಸಾವು

ಉಡುಪಿ: ಪ್ರವಾಸಿಗರ ದೋಣಿ ದುರಂತ – ಇಬ್ಬರ ಸಾವು

0
29

ಉಡುಪಿ: ಪ್ರವಾಸಿಗರನ್ನು ವಿಹಾರಕ್ಕೆ ಕರೆದೊಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಜ.26ರ ಸೋಮವಾರ ಬೆಳಗ್ಗೆ ಕೋಡಿಬೆಂಗ್ರೆ ಬೀಚ್ ಸಮೀಪ ನಡೆದಿದೆ. ಈ ದುರಂತದಲ್ಲಿ ಹಲವರು ಅಸ್ವಸ್ಥಗೊಂಡಿದ್ದಾರೆ.

ಮೃತರನ್ನು ಶಂಕರಪ್ಪ (22) ಮತ್ತು ಸಿಂಧು (23) ಎಂದು ಗುರುತಿಸಲಾಗಿದ್ದು, ದೀಶಾ (26) ಎಂಬ ಯುವತಿಯ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಧರ್ಮರಾಜ (26) ಎಂಬವರು ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಕೆ ಕಾಣುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:  ಸಂಘರ್ಷ ರಹಿತ ರಾಜ್ಯಪಾಲರ ನಡೆ: ಗಣರಾಜ್ಯ ಭಾಷಣ ನಿರಾಳ

ಮೈಸೂರಿನ ಸರಸ್ವತಿಪುರಂನಲ್ಲಿರುವ ಕಾಲ್ ಸೆಂಟರ್ ವೊಂದರ ಉದ್ಯೋಗಿಗಳಾದ ಈ ಪ್ರವಾಸಿಗರು ಉಡುಪಿಯ ಸ್ಥಳೀಯ ರೆಸಾರ್ಟ್‌ನಲ್ಲಿ ತಂಗಿದ್ದರು. ವಿಹಾರಕ್ಕಾಗಿ ಮಲ್ಪೆ ಡೆಲ್ಟಾ ಬೀಚ್ ಪಾಯಿಂಟ್‌ನಿಂದ ಹೊರಟ ‘ವೇವ್‌ರೈಡರ್ಸ್’ (Waveriders) ಕಂಪನಿಗೆ ಸೇರಿದ ದೋಣಿ, ಹಂಗಾರಕಟ್ಟೆ ಹಡಗು ನಿರ್ಮಾಣ ಪ್ರದೇಶದ ಬಳಿ ನದಿ ಹಾಗೂ ಸಮುದ್ರ ಸೇರುವ ಅಳಿವೆ ಬಾಗಿಲಿನಲ್ಲಿ ಮಗುಚಿ ಬಿದ್ದಿದೆ.

ದೋಣಿಯಲ್ಲಿ ಒಟ್ಟು 14 ಮಂದಿ ಪ್ರವಾಸಿಗರಿದ್ದು, ಘಟನೆಯ ಸಮಯದಲ್ಲಿ ಯಾರು ಕೂಡ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ದೋಣಿ ಮಗುಚಿದ ತಕ್ಷಣ ಸ್ಥಳೀಯರು ಹಾಗೂ ಇತರ ದೋಣಿಯಲ್ಲಿದ್ದವರು ತಕ್ಷಣವೇ ಧಾವಿಸಿ ಪ್ರವಾಸಿಗರನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.

ಇದನ್ನೂ ಓದಿ:  400 ಕೋಟಿ ಪ್ರಕರಣ ಕೇಂದ್ರ ಸರ್ಕಾರದಿಂದಲೇ ತನಿಖೆ ಆಗಲಿ

ಘಟನೆ ವೇಳೆ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಉಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ಈ ಘಟನೆ ಮಲ್ಪೆ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಭಾಗದಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೋಣಿ ಸಂಚಾರದ ವೇಳೆ ಸುರಕ್ಷತಾ ನಿಯಮಗಳ ಪಾಲನೆ ಆಗಿದೆಯೇ?, ಲೈಫ್ ಜಾಕೆಟ್ ಬಳಕೆ ಯಾಕೆ ಕಡ್ಡಾಯಗೊಳಿಸಲಿಲ್ಲ? ಎಂಬ ಕುರಿತು ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ:  ಸರ್ಕಾರದ ವೈಫಲ್ಯದಿಂದ ಕರ್ನಾಟಕ ಬಾಂಗ್ಲಾ ನಿವಾಸಿಗಳ ತವರೂರಾಗಿದೆ

ಆದರೆ ದೋಣಿಯ ಪ್ರಯಾಣಿಕರೊಬ್ಬರು ನೀಡಿದ ಹೇಳಿಕೆಯಂತೆ, ಎಲ್ಲರಿಗೂ ಲೈಫ್ ಜಾಕೆಟ್ ನೀಡಲಾಗಿತ್ತು, ಆದರೆ ಕೆಲವರು ಅದನ್ನು ಧರಿಸದೆ ಇದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಮತ್ತು ಕರಾವಳಿ ಭದ್ರತಾ ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ದುರ್ಘಟನೆ ಕರಾವಳಿ ಪ್ರವಾಸೋದ್ಯಮದಲ್ಲಿ ಸುರಕ್ಷತಾ ಕ್ರಮಗಳ ಮಹತ್ವವನ್ನು ಮತ್ತೆ ಒತ್ತಿ ಹೇಳಿದ್ದು, ಮುಂದಿನ ದಿನಗಳಲ್ಲಿ ದೋಣಿ ವಿಹಾರಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Previous article400 ಕೋಟಿ ಪ್ರಕರಣ ಕೇಂದ್ರ ಸರ್ಕಾರದಿಂದಲೇ ತನಿಖೆ ಆಗಲಿ