Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಸಂಘರ್ಷ ರಹಿತ ರಾಜ್ಯಪಾಲರ ನಡೆ: ಗಣರಾಜ್ಯ ಭಾಷಣ ನಿರಾಳ

ಸಂಘರ್ಷ ರಹಿತ ರಾಜ್ಯಪಾಲರ ನಡೆ: ಗಣರಾಜ್ಯ ಭಾಷಣ ನಿರಾಳ

0
1

ಮುಂಚಿತ ಅನುಮೋದನೆಯಿಂದ ತಪ್ಪಿದ ವಿವಾದ: ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧ

ಬೆಂಗಳೂರು: ವಿಧಾನಸಭೆಯ ಭಾಷಣ ಕುರಿತಾದ ವಿವಾದದ ನಂತರ, ಇದು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಿನ ಮೊದಲ ಸಾರ್ವಜನಿಕ ಮುಖಾಮುಖಿಯಾಗಿತ್ತು. ಆದರೆ ಈ ಬಾರಿ ಯಾವುದೇ ಅಸಮಾಧಾನ ಅಥವಾ ಸಂಘರ್ಷವಿಲ್ಲದೆ, ಗಣರಾಜ್ಯೋತ್ಸವ ಸಮಾರಂಭ ಸುಗಮವಾಗಿ ನಡೆದಿದ್ದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಹಿಂದಿನ ವಿಧಾನಸಭಾ ಅಧಿವೇಶನದ ವೇಳೆ, ಸರ್ಕಾರ ತಯಾರಿಸಿದ್ದ ಭಾಷಣದ ಕೆಲವು ಅಂಶಗಳನ್ನು ಓದಲು ನಿರಾಕರಿಸಿ ರಾಜ್ಯಪಾಲರು ಸದನದಿಂದ ಹೊರನಡೆದಿದ್ದರು. ಆ ಘಟನೆಯಿಂದಾಗಿ ರಾಜ್ಯಪಾಲ–ಸರ್ಕಾರ ಸಂಬಂಧಗಳಲ್ಲಿ ತೀವ್ರತೆ ಕಂಡುಬಂದಿತ್ತು. ಇದೇ ಹಿನ್ನೆಲೆಯಲ್ಲಿ, ಗಣರಾಜ್ಯೋತ್ಸವ ಸಮಾರಂಭವೂ ಮತ್ತೊಂದು ಸಂಘರ್ಷದ ವೇದಿಕೆಯಾಗಬಹುದೆಂಬ ಅನುಮಾನಗಳು ವ್ಯಕ್ತವಾಗಿದ್ದವು.

ಮುಂಚಿತ ಅನುಮೋದನೆಯಿಂದ ತಪ್ಪಿದ ವಿವಾದ: ಈ ಬಾರಿ ಸರ್ಕಾರ, ರಾಜ್ಯಪಾಲರಿಗೆ ಭಾಷಣದ ಕರಡನ್ನು ಮುಂಚಿತವಾಗಿ ಕಳುಹಿಸಿ ಅನುಮೋದನೆ ಪಡೆದುಕೊಂಡಿತ್ತು. ರಾಜ್ಯಪಾಲರು ಭಾಷಣಕ್ಕೆ ಮುದ್ರೆ ಒತ್ತಿದ ನಂತರವೇ ಸಾರ್ವಜನಿಕವಾಗಿ ಓದಲು ಸಿದ್ಧರಾಗಿದ್ದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಗಮನಾರ್ಹ ಅಂಶವೆಂದರೆ, ಈ ಬಾರಿ ರಾಜ್ಯಪಾಲರಿಗೆ ಸಿದ್ಧಪಡಿಸಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಯಾವುದೇ ಅಂಶಗಳನ್ನು ಸೇರಿಸಲಾಗಿರಲಿಲ್ಲ. ಇದರ ಪರಿಣಾಮವಾಗಿ, ಯಾವುದೇ ವಿವಾದವಿಲ್ಲದೆ ರಾಜ್ಯಪಾಲರು ಸಂಪೂರ್ಣ ಭಾಷಣವನ್ನು ನಿರಾತಂಕವಾಗಿ ಓದಿದರು. ಇದರಿಂದ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ನಡೆಯಲಿದೆ ಎಂಬ ಅನುಮಾನಗಳು ಹುಸಿಯಾದವು.

ರಾಜ್ಯಪಾಲರ ಭಾಷಣದ ಪ್ರಮುಖ ಅಂಶಗಳು: ರಾಜ್ಯಪಾಲರು ತಮ್ಮ ಭಾಷಣದಲ್ಲಿ ಭಾರತದ ಗಣರಾಜ್ಯ ದಿನದ ಐತಿಹಾಸಿಕ ಮಹತ್ವವನ್ನು ಹೇಳುತ್ತಾ, ಸಂವಿಧಾನದ ಜಾರಿಗೆ ಬಂದ ದಿನವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಾನತೆಯನ್ನು ಘೋಷಿಸಿದ ಮಹತ್ವದ ಘಟ್ಟ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಕೊಡುಗೆಗಳನ್ನು ಸ್ಮರಿಸಿದ ಅವರು, ರಾಜ್ಯ ಸರ್ಕಾರ ಜನಕಲ್ಯಾಣ ಹಾಗೂ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ ಎಂದು ತಿಳಿಸಿದರು.

ಜನಕಲ್ಯಾಣ ಮತ್ತು ಗ್ಯಾರಂಟಿ ಯೋಜನೆಗಳಿಗೆ ಭಾರೀ ವೆಚ್ಚ: ರಾಜ್ಯ ಸರ್ಕಾರವು ಜನಕಲ್ಯಾಣ ಯೋಜನೆಗಳಿಗೆ ವರ್ಷಕ್ಕೆ ₹1.12 ಲಕ್ಷ ಕೋಟಿ ಹಾಗೂ ಗ್ಯಾರಂಟಿ ಯೋಜನೆಗಳಿಗೆ ₹1.13 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ ಎಂದು ಭಾಷಣದಲ್ಲಿ ಉಲ್ಲೇಖಿಸಲಾಯಿತು.

ಇದಲ್ಲದೆ, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂಬುದನ್ನು ರಾಜ್ಯಪಾಲರು ಪ್ರಸ್ತಾಪಿಸಿದರು.

ಅಭಿವೃದ್ಧಿ ಮತ್ತು ಹೂಡಿಕೆ: ಕರ್ನಾಟಕ ಮುಂಚೂಣಿಯಲ್ಲಿ 2025–26ರ ಬಜೆಟ್‌ನಲ್ಲಿ ₹83,200 ಕೋಟಿ ಬಂಡವಾಳ ವೆಚ್ಚ ಮೀಸಲಿಡಲಾಗಿದೆ. ಬೆಂಗಳೂರಿನಲ್ಲಿ ಸುಮಾರು ₹1.5 ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.

ಸೆಮಿಕಂಡಕ್ಟರ್‌, ಏರೋಸ್ಪೇಸ್‌, ಕ್ವಾಂಟಮ್ ತಂತ್ರಜ್ಞಾನ ಸೇರಿದಂತೆ ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಅವರು ಹೇಳಿದರು.

ಕಂದಾಯ ಹಾಗೂ ಭೂ ಸುಧಾರಣೆಯಲ್ಲಿ ಪ್ರಗತಿ: ಕಂದಾಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಶೇ.80ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 91,163 ಫೋಡಿಗಳು ಪೂರ್ಣ. 4,050 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ. 1.11 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ. ಬಿ-ಖಾತಾಗಳನ್ನು ಎ-ಖಾತಾಗಳಾಗಿ ಪರಿವರ್ತಿಸಲು ಅನುಮೋದನೆ. ಶಿಕ್ಷಣ, ಹಾಲು ಉತ್ಪಾದನೆ ಮತ್ತು ರೈತಪರ ಕ್ರಮಗಳು ಕರ್ನಾಟಕವು ದೇಶದಲ್ಲೇ ಅತಿದೊಡ್ಡ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ ಎಂದು ರಾಜ್ಯಪಾಲರು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೇಜಿ ತರಗತಿಗಳನ್ನು ಆರಂಭಿಸಲಾಗುತ್ತಿದೆ.

9.07 ಲಕ್ಷ ಹಾಲು ಉತ್ಪಾದಕರಿಗೆ ₹4,130 ಕೋಟಿ ಪ್ರೋತ್ಸಾಹ ಧನವನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ. ದೇವನಹಳ್ಳಿಯಲ್ಲಿ ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲಾಗಿದ್ದು, ಎಸ್‌ಸಿಎಸ್‌ಪಿ–ಟಿಎಸ್‌ಪಿ, ಬಡ್ತಿ ಮೀಸಲಾತಿ, ಒಳ ಮೀಸಲಾತಿ ಸೇರಿದಂತೆ ಪರಿಶಿಷ್ಟ ಸಮುದಾಯಗಳ ಬಲವರ್ಧನೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಭಾಷಣದಲ್ಲಿ ತಿಳಿಸಲಾಗಿದೆ.

ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧ: ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು ಹಾಗೂ ರೈತರ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದರು.

Previous articleಖ್ಯಾತ ಪತ್ರಕರ್ತ, ಲೇಖಕ ಮಾರ್ಕ್ ಟುಲ್ಲಿ ಇನ್ನಿಲ್ಲ