ಕಲಬುರಗಿ: ನಗರದಲ್ಲಿ ಮುಖ್ಯ ಪೊಲೀಸ್ ಪೇದೆಯೊಬ್ಬರು ಟ್ರೇಡಿಂಗ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿ 80.40 ಲಕ್ಷ ರೂ. ವಂಚನೆಗೊಳಗಾಗಿರುವ ಘಟನೆ ನಡೆದಿದೆ.
ಅಕ್ಕಮಹಾದೇವಿ ಕಾಲೋನಿ ನಿವಾಸಿ, ಉಚ್ಛ ನ್ಯಾಯಾಲಯದ ಭದ್ರತಾ ಪಡೆಯ ಮುಖ್ಯ ಪೇದೆ ಮಹೇಶ ಸಜ್ಜನ ಎಂಬುವರು ವಂಚನೆಗೊಂಡಿದ್ದಾರೆ. ಮಹೇಶ ಸಜ್ಜನ ಅವರು ಕಳೆದ 6 ತಿಂಗಳ ಹಿಂದೆ ಆ್ಯಪನ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ವ್ಯವಹಾರ ಮಾಡುತ್ತಿದ್ದರು.
ಜ. 21ರಂದು ವಾಟ್ಸಪ್ ಗ್ರುಪ್‌ವೊಂದರಲ್ಲಿ ಮಹೇಶ ಅವರ ಹೆಸರು ಸೇರ್ಪಡೆ ಮಾಡಿ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಕೆ ಮಾಡಬಹುದು ಎಂಬ ಸಂದೇಶಗಳು ಕಳುಹಿಸಿ ಆಸೆ ಹುಟ್ಟಿಸಿದ್ದಾರೆ.
ಇದನ್ನೂ ಓದಿ: ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ ಎಂಟು ಸಾಧಕರಿಗೆ ಗೌರವ
ಮಹೇಶ ಅವರು ತಮ್ಮ ಕೆನರಾ ಬ್ಯಾಂಕ್ ಖಾತೆಯಿಂದ 34,05,000 ಹಾಗೂ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 27,35 ಲಕ್ಷ ರೂ. ಹಾಗೂ ಅವರ ಸ್ನೇಹಿತ ಮಂಜುನಾಥ ಸಜ್ಜನ ಅವರ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 19 ಲಕ್ಷ ರೂ. ಸೇರಿ ಒಟ್ಟು 80.40 ಲಕ್ಷ ರೂ. ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.
ಆ ಬಳಿಕ ಮಹೇಶ ಸಜ್ಜನ ಅವರ ಟ್ರೇಡಿಂಗ್ ಖಾತೆಯಲ್ಲಿ 6 ಕೋಟಿ ರೂ.ಗೂ ಅಧಿಕ ಲಾಭ ತೋರಿಸಿದೆ. ಈ ಹಣ ಡ್ರಾ ಮಾಡಿಕೊಳ್ಳಲು ಹೋದಾಗ ಬಂದಿರುವ ಲಾಭಕ್ಕೆ 96 ಲಕ್ಷ ರೂ. ತೆರಿಗೆ ಪಾವತಿಸಿ ಹಣ ಡ್ರಾ ಮಾಡಿಕೊಳ್ಳಬಹುದು ಎಂದು ಟ್ರೇಡಿಂಗ್ ಖಾತೆಯಲ್ಲಿ ಸಂದೇಶ ಬಂದಾಗ ಮಹೇಶ ಸಜ್ಜನ ಅವರು ವಂಚನೆಗೊಂಡಿರುವುದು ಗೊತ್ತಾಗಿದೆ.
ಹಂತ ಹಂತವಾಗಿ 80.40 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ಹೆಚ್ಚಿನ ಲಾಭದ ಭರವಸೆ ನೀಡಿ ವಂಚಿಸಿ ಸಂಪರ್ಕಕ್ಕೆ ಸಿಗದೆ ಆನ್‌ಲೈನ್ ಮೂಲಕ ಮೋಸ ಮಾಡಿದ ಸೈಬರ್ ವಂಚಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಮಹೇಶ ಸಜ್ಜನ ನಗರದ ಸಿಇಎನ್ ಠಾಣೆಗೆ ಮೊರೆ ಹೋಗಿದ್ದಾರೆ.























