ಜೈಪುರ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಇಬ್ಬರು ಅಪರಾಧಿಗಳು ಪ್ರೀತಿಯ ಬಲೆಗೆ ಬಿದಿದ್ದು, ಮದುವೆಯಾಗಲು ನ್ಯಾಯಾಲಯ ಪೆರೋಲ್ ನೀಡಿದೆ.
ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಗುರಿಯಾಗಿರುವ ಪ್ರಿಯಾ ಸೇಥ್ ಮತ್ತು ಹನುಮಾನ್ ಪ್ರಸಾದ್ ಅಲಿಯಾಸ್ ಜ್ಯಾಕ್ ಮದುವೆಯಾಗುತ್ತಿರುವ ಕೈದಿಗಳು.
ರಾಜಸ್ಥಾನ ಹೈಕೋರ್ಟ್‌ನ ಹಸ್ತಕ್ಷೇಪದ ನಂತರ, ಜಿಲ್ಲಾ ಪೆರೋಲ್ ಸಲಹಾ ಸಮಿತಿ 15 ದಿನಗಳ ಪೆರೋಲ್ ನೀಡಿದೆ. ಪೆರೋಲ್ ಮೇಲೆ ಬಿಡುಗಡೆಯಾದ ಬಳಿಕ ವಿವಾಹ ಕಾರ್ಯಗಳು ಆರಂಭವಾಗಲಿವೆ. ಅಲ್ವಾರ್ ಜಿಲ್ಲೆಯ ಬರೋಡಾ ಮೇವ್ ಗ್ರಾಮದಲ್ಲಿರುವ ಹನುಮಾನ್ ಪ್ರಸಾದ್ ಅವರ ಮನೆಯಲ್ಲಿ ವಿವಾಹ ನೆರವೇರಲಿದೆ.
ಪ್ರೇಮ ಕಥೆ ಶುರುವಾಗಿದ್ಹೇಗೆ?: ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಪ್ರಿಯಾ ಸೇಥ್ ಮತ್ತು ಹನುಮಾನ್ ಪ್ರಸಾದ್ ಜೈಲು ಸೇರಿದ್ದರು. ಆದರೆ ಸುಮಾರು ಒಂದು ವರ್ಷದ ಹಿಂದೆ, ರಾಜಸ್ಥಾನ ಕೈದಿಗಳ ಓಪನ್ ಏರ್ ಕ್ಯಾಂಪ್ ನಿಯಮಗಳು 1972ರ ಅಡಿಯಲ್ಲಿ ಇಬ್ಬರನ್ನೂ ತೆರೆದ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಕೈದಿಗಳು ಹೊಂದಿರುತ್ತಾರೆ. ಕೆಲಸ ಮಾಡಬಹುದು, ಕುಟುಂಬ ಸದಸ್ಯರನ್ನೂ ಭೇಟಿಯಾಗಬಹುದು. ಒಂದು ಸಾಮಾನ್ಯ ಜೀವನದ ನೋಟವನ್ನು ಅನುಭವಿಸಬಹುದು.
ಈ ರೀತಿಯ ವಾತಾವರಣದಲ್ಲಿ ವರ್ಷದ ಹಿಂದೆಯೇ ಒಬ್ಬರನ್ನೊಬ್ಬರು ಭೇಟಿಯಾಗಿದ್ದಾರೆ, ಇಬ್ಬರ ಮಧ್ಯೆ ಪ್ರೀತಿ ಉಂಟಾಗಿದೆ. ಕಳೆದ ಕೆಲವು ತಿಂಗಳುಗಳಿಂದ, ಅವರು ಜೈಲಿನ ಆವರಣದಲ್ಲಿ ಲಿವ್-ಇನ್ ಸಂಬಂಧದಂತೆ ಒಟ್ಟಿಗೆ ವಾಸಿಸುತ್ತಿದ್ದರು. ಬಳಿಕ ನವೆಂಬರ್ 2025ರಲ್ಲಿಯೇ ಇಬ್ಬರು ಮದುವೆಗೆ ಸಿದ್ಧರಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಡಿಸೆಂಬರ್‌ನಲ್ಲಿ ಪೆರೋಲ್‌ಗಾಗಿ ಅರ್ಜಿ ಸಲ್ಲಿಸಿದ್ದು, 2026ರ ಜನವರಿ 7ರಂದು, ರಾಜಸ್ಥಾನ ಹೈಕೋರ್ಟ್ ಜಿಲ್ಲಾ ಪೆರೋಲ್ ಸಲಹಾ ಸಮಿತಿಗೆ ಏಳು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶಿಸಿತು. ಸದ್ಯ ಸಮಿತಿಯು ಇಬ್ಬರಿಗೂ ಪೆರೋಲ್ ನೀಡಿದ್ದು, ಪೆರೋಲ್ ನಂತರ, ಇಬ್ಬರಿಗೂ ಜೈಲಿಗೆ ಮರಳಲು ಸೂಚಿಸಿದೆ.




















