ಸುನೀತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಸೇವೆಗೆ ಗುಡ್‌ಬೈ

0
27

ಬಾಹ್ಯಾಕಾಶ ನಡಿಗೆಯಲ್ಲಿ ದಾಖಲೆ: 3 ಮಿಷನ್‌ಗಳು – 608 ದಿನಗಳ ಬಾಹ್ಯಾಕಾಶ ಜೀವನ

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ, ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸುನೀತಾ ವಿಲಿಯಮ್ಸ್ ಅವರು ನಾಸಾದಿಂದ ನಿವೃತ್ತಿಯಾಗಿದ್ದಾರೆ. 2025ರ ಡಿಸೆಂಬರ್ 27ರಂದು ಅವರು ಅಧಿಕೃತವಾಗಿ ನಿವೃತ್ತಿಯಾದ ವಿಚಾರವನ್ನು ನಾಸಾ ಮಂಗಳವಾರ ಪ್ರಕಟಿಸಿದೆ.

ಇದರೊಂದಿಗೆ, 27 ವರ್ಷಗಳ ಸುದೀರ್ಘ ಮತ್ತು ಸಾಧನಾಮಯ ಬಾಹ್ಯಾಕಾಶ ಸೇವೆಗೆ ಸುನೀತಾ ವಿಲಿಯಮ್ಸ್ ಗುಡ್‌ಬೈ ಹೇಳಿದ್ದಾರೆ.

ಇದನ್ನೂ ಓದಿ: ದೇಶಿ ಕೈಗಾರಿಕೆಗೆ ಬಲ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಗುರಿ

ನಾಸಾ ಆಡಳಿತಾಧಿಕಾರಿಯ ಶ್ಲಾಘನೆ: ಈ ಕುರಿತು ಪ್ರತಿಕ್ರಿಯಿಸಿದ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, “ಸುನೀತಾ ವಿಲಿಯಮ್ಸ್ ಮಾನವ ಬಾಹ್ಯಾಕಾಶ ಹಾರಾಟದ ಪ್ರವರ್ತಕಿ. ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗಳು ಅಪಾರ. ಚಂದ್ರ ಹಾಗೂ ಮಂಗಳ ಗ್ರಹದತ್ತ ನಮ್ಮ ಮುಂದಿನ ಪ್ರಯತ್ನಗಳಿಗೆ ಅವರ ಕಾರ್ಯ ಭದ್ರ ಅಡಿಪಾಯವಾಗಿದೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಶಾಶ್ವತ ಪ್ರೇರಣೆ,” ಎಂದು ಶ್ಲಾಘಿಸಿದರು.

3 ಮಿಷನ್‌ಗಳು – 608 ದಿನಗಳ ಬಾಹ್ಯಾಕಾಶ ಜೀವನ: 1998ರಲ್ಲಿ ನಾಸಾಗೆ ಆಯ್ಕೆಯಾದ ಸುನೀತಾ ವಿಲಿಯಮ್ಸ್, ತಮ್ಮ ವೃತ್ತಿಜೀವನದಲ್ಲಿ 3 ಬಾಹ್ಯಾಕಾಶ ಮಿಷನ್‌ಗಳಲ್ಲಿ ಭಾಗವಹಿಸಿ ಒಟ್ಟು 608 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ನಡೆಸಿದ 286 ದಿನಗಳ ನಿರಂತರ ಬಾಹ್ಯಾಕಾಶ ಪ್ರಯಾಣ, ಇತಿಹಾಸದಲ್ಲೇ ಅತಿ ಉದ್ದದ ಮಾನವ ಬಾಹ್ಯಾಕಾಶ ಯಾನಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Lokayan 2026: INS ಸುದರ್ಶಿನಿ 13 ದೇಶಗಳ 18 ಬಂದರುಗಳಿಗೆ ಭೇಟಿ

ಆಶ್ಚರ್ಯಕರ ಸಂಗತಿ ಎಂದರೆ, ಕೇವಲ 8 ದಿನಗಳ ಮಿಷನ್‌ಗಾಗಿ ತೆರಳಿದ್ದ ಸುನೀತಾ, ತಾಂತ್ರಿಕ ಕಾರಣಗಳಿಂದ 286 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಉಳಿಯಬೇಕಾಯಿತು.

ಬಾಹ್ಯಾಕಾಶ ನಡಿಗೆಯಲ್ಲಿ ದಾಖಲೆ: ಬೋಯಿಂಗ್‌ನ ಸ್ಟಾರ್‌ಲೈನರ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದ ಸುನೀತಾ ವಿಲಿಯಮ್ಸ್, 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ (Spacewalk) ಪೂರೈಸಿದ್ದಾರೆ. ಈ ಮೂಲಕ ಅವರು ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾದರು.

ಅವರ ಹಾಗೂ ಬುಚ್ ವಿಲ್ಮೋರ್ ಅವರ ಮಿಷನ್ ಅವಧಿಯಲ್ಲಿ, ಒಟ್ಟು 1 ಕೋಟಿ 21 ಲಕ್ಷಕ್ಕೂ ಹೆಚ್ಚು ಮೈಲುಗಳು (12,13,47,491 miles) ಪ್ರಯಾಣವಾಗಿದೆ.

ಇದನ್ನೂ ಓದಿ: ಬ್ಯಾಡ್ಮಿಂಟನ್ ವೃತ್ತಿ ಜೀವನಕ್ಕೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಣೆ

ಬಾಲ್ಯ, ಶಿಕ್ಷಣ ಮತ್ತು ಬಾಹ್ಯಾಕಾಶ ಪಯಣ: ಸುನೀತಾ ವಿಲಿಯಮ್ಸ್ ಅವರು 1965ರ ಸೆಪ್ಟೆಂಬರ್ 19ರಂದು, ಅಮೆರಿಕದ ಓಹಿಯೋ ರಾಜ್ಯದ ಯೂಕ್ಲಿಡ್‌ನಲ್ಲಿ ಜನಿಸಿದರು. ಅವರ ತಂದೆ ಡಾ. ದೀಪಕ್ ಪಾಂಡ್ಯ, ಗುಜರಾತ್ ಮೂಲದ ನರಶಸ್ತ್ರಚಿಕಿತ್ಸಕ ಹಾಗೂ ತಾಯಿ ಉರ್ಸುಲಿನ್ ಬೋನಿ ಪಾಂಡ್ಯ.

2006ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನಡಿಗೆ. 2012ರಲ್ಲಿ ಕಝಾಕಿಸ್ತಾನ್‌ನಿಂದ ಎಕ್ಸ್‌ಪೆಡಿಶನ್ 32/33 ಮಿಷನ್. ನಂತರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಮಾಂಡರ್ ಆಗಿ ಸೇವೆ. 2024ರ ಜೂನ್‌ನಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ಕೊನೆಯ ಮಿಷನ್. 2025ರ ಮಾರ್ಚ್‌ನಲ್ಲಿ ಭೂಮಿಗೆ ವಾಪಸ್

Previous articleಹುಬ್ಬಳ್ಳಿಯಲ್ಲೂ ಪತ್ರಕರ್ತರ ಊಟಕ್ಕಾಗಿ 2 ಲಕ್ಷ ವಸೂಲಿ… !