ಸುರತ್ಕಲ್: ಡ್ರಗ್ಸ್ ಸೇವನೆಯು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಅವನ ಕುಟುಂಬದ ಭವಿಷ್ಯವನ್ನೂ ಸರ್ವನಾಶ ಮಾಡುವ ಭೀಕರ ದುಶ್ಚಟವಾಗಿದೆ. ಭಾರತದ ಯುವ ಸಮುದಾಯವು ಸ್ವಾಮಿ ವಿವೇಕಾನಂದರ ರಾಷ್ಟ್ರೀಯತೆಯ ವಿಚಾರಧಾರೆಯನ್ನು ಅಳವಡಿಸಿಕೊಂಡು, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಕರೆ ನೀಡಿದರು.
ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಅಂಗವಾಗಿ ಯೂಥ್ ಫಾರ್ ನೇಶನ್ ಯುವ ಸಂಘಟನೆ ಹಾಗೂ ಸುರತ್ಕಲ್ ಗೋವಿಂದ ದಾಸ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾದ ‘ಡ್ರಗ್ಸ್ ಫ್ರೀ ಇಂಡಿಯಾ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಆಯ್ಕೆ
ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಮಾರಕ ದುಷ್ಪರಿಣಾಮಗಳ ಬಗ್ಗೆ ಸಮರ್ಪಕ ಜ್ಞಾನ ಹೊಂದಿದ್ದರೆ, ಯುವಕರು ಅವುಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಡಾ. ಭರತ್ ಶೆಟ್ಟಿ ಹೇಳಿದರು. ಸಿಗರೇಟು, ಮದ್ಯಪಾನ, ಗಾಂಜಾ, ಅಫೀಮು ಸೇರಿದಂತೆ ವಿವಿಧ ಮಾದಕ ವಸ್ತುಗಳು ದೇಹದ ಮೇಲೆ ತೀವ್ರ ಹಾನಿ ಉಂಟುಮಾಡುವುದರ ಜೊತೆಗೆ ವ್ಯಕ್ತಿಯನ್ನು ದುಶ್ಚಟಗಳ ದಾರಿಯಲ್ಲಿ ಕೊಂಡೊಯ್ಯುತ್ತವೆ. ಪರಿಣಾಮವಾಗಿ ಜೀವನವೇ ನಾಶವಾಗುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.
ಒಮ್ಮೆ ಡ್ರಗ್ಸ್ ವ್ಯಸನಕ್ಕೆ ಒಳಗಾದರೆ, ಭಾರತದ ಕಾನೂನು ಪ್ರಕಾರ ಗಂಭೀರ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇದರಿಂದ ಸರಕಾರಿ ಉದ್ಯೋಗ, ವಿದೇಶಿ ಉದ್ಯೋಗ ಸೇರಿದಂತೆ ಹಲವು ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ. ಕೇಸು ದಾಖಲಾಗುವುದರಿಂದ ಸಮಾಜದಲ್ಲಿಯೂ ಗೌರವ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ದೇಶಿ ಕೈಗಾರಿಕೆಗೆ ಬಲ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಗುರಿ
ಈ ಹಿನ್ನೆಲೆಯಲ್ಲಿ ಯುವ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಭಾರತದ ಭವಿಷ್ಯವನ್ನು ರೂಪಿಸುವ ಶಕ್ತಿಗಳಾಗಿ ಬೆಳೆಯಬೇಕು. ಭವಿಷ್ಯದ ಭಾರತವನ್ನು ಕಟ್ಟುವ ಜವಾಬ್ದಾರಿಯನ್ನು ಅರಿತು, ಯಾವುದೇ ದುಶ್ಚಟಗಳಿಗೆ ಒಳಗಾಗದೆ, ಯಾವುದೇ ಪ್ರಭಾವಕ್ಕೂ ಬಲಿಯಾಗುವುದಿಲ್ಲ ಎಂಬ ದೃಢಸಂಕಲ್ಪವನ್ನು ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್, ಸ್ವಾಮಿ ವಿವೇಕಾನಂದರ ತತ್ವ ಹಾಗೂ ಆದರ್ಶಗಳನ್ನು ರೂಪಿಸುವಲ್ಲಿ ಅವರ ತಂದೆ-ತಾಯಿಯು ನೀಡಿದ ಉತ್ತಮ ಸಂಸ್ಕಾರಗಳೇ ಪ್ರಮುಖ ಕಾರಣವೆಂದು ಹೇಳಿದರು. ಪೋಷಕರು ಮಕ್ಕಳ ಭವಿಷ್ಯದ ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕು ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Lokayan 2026: INS ಸುದರ್ಶಿನಿ 13 ದೇಶಗಳ 18 ಬಂದರುಗಳಿಗೆ ಭೇಟಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ. ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಯೂಥ್ ಫಾರ್ ನೇಶನ್ ಸಂಘದ ಕಾರ್ಯದರ್ಶಿ ಶ್ರೀರಂಗ ಎಚ್, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್, ಕರಾವಳಿ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಉಪ ಪ್ರಾಂಶುಪಾಲೆ ಸುನೀತಾ, ಟ್ರಸ್ಟಿ ಎಂ.ಜಿ. ರಾಮಚಂದ್ರ ರಾವ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ರಕ್ಷಿತ್ ಪೂಜಾರಿ ಸ್ವಾಗತಿಸಿ, ಉಪನ್ಯಾಸಕ ಪೈಕ ವೆಂಕಟ್ರಮಣ ಭಟ್ ವಂದಿಸಿದರು.























