ನವದೆಹಲಿ: “ನಾನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ. ಪಕ್ಷದ ವಿಚಾರಗಳಲ್ಲಿ ನಿತಿನ್ ನಬಿನ್ ಅವರು ನನಗೂ ಬಾಸ್” ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಅಧಿಕಾರ ವಹಿಸಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ನವಾಧ್ಯಕ್ಷರಿಗೆ ಶುಭಾಶಯಗಳನ್ನು ತಿಳಿಸಿದರು.
ನಿತಿನ್ ನಬಿನ್ ಅವರ ರಾಜಕೀಯ ಅನುಭವ ಮತ್ತು ವಯಸ್ಸನ್ನು ಉಲ್ಲೇಖಿಸಿದ ಮೋದಿ, “ನಿಮಗೆ ಅನುಭವವಿದೆ, ಪಕ್ಷವನ್ನು ಇನ್ನಷ್ಟು ವಿಸ್ತರಿಸುವ ಜವಾಬ್ದಾರಿ ಈಗ ನಿಮ್ಮ ಮುಂದೆ ಇದೆ” ಎಂದು ಹೇಳಿದರು. ಪಕ್ಷದ ವಿಚಾರದಲ್ಲಿ ನಾನು ಕೂಡ ಒಬ್ಬ ಕಾರ್ಯಕರ್ತನೇ ಆಗಿದ್ದು, ಸಂಘಟನೆಯೊಳಗೆ ಎಲ್ಲರೂ ಶಿಸ್ತಿನಡಿ ಕೆಲಸ ಮಾಡಬೇಕು ಎಂಬ ಸಂದೇಶವನ್ನು ಈ ಮೂಲಕ ನೀಡಿದರು.
ಇದನ್ನೂ ಓದಿ: Lokayan 2026: INS ಸುದರ್ಶಿನಿ 13 ದೇಶಗಳ 18 ಬಂದರುಗಳಿಗೆ ಭೇಟಿ
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರಿಗೆ ಪಕ್ಷದ ಹೊಣೆಗಾರಿಕೆ ಮಾತ್ರವಲ್ಲದೆ, ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟ (ಎನ್‌ಡಿಎ) ಒಳಗಿನ ಸಹಕಾರವನ್ನು ಬಲಪಡಿಸುವ ಜವಾಬ್ದಾರಿಯೂ ಇದೆ ಎಂದು ಪ್ರಧಾನಿ ಮೋದಿ ಹೇಳಿದರು. “ಎನ್‌ಡಿಎಯ ಶಕ್ತಿ ಒಗ್ಗಟ್ಟಿನಲ್ಲಿದೆ. ಮೈತ್ರಿ ಪಕ್ಷಗಳ ನಡುವೆ ಸಮನ್ವಯ ಸಾಧಿಸುವುದು ಪ್ರಮುಖ ಜವಾಬ್ದಾರಿಯಾಗಿದೆ” ಎಂದು ಅವರು ತಿಳಿಸಿದರು.
ಬಿಜೆಪಿಯ ಇತಿಹಾಸವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, “ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರ ನೇತೃತ್ವದಲ್ಲಿ ಬಿಜೆಪಿ ಶೂನ್ಯದಿಂದ ಬೆಳೆದು ಬಂತು. ವೆಂಕಯ್ಯ ನಾಯ್ಡು ಮತ್ತು ನಿತಿನ್ ಗಡ್ಕರಿ ಅವರಂತಹ ನಾಯಕರು ಪಕ್ಷವನ್ನು ದೇಶಾದ್ಯಂತ ವಿಸ್ತರಿಸಿದರು” ಎಂದು ಹೇಳಿದರು.
ಇದನ್ನೂ ಓದಿ: ದೇಶಿ ಕೈಗಾರಿಕೆಗೆ ಬಲ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಗುರಿ
“ರಾಜನಾಥ್ ಸಿಂಗ್ ಅವರು ಪಕ್ಷದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಬಿಜೆಪಿ ಕೇಂದ್ರದಲ್ಲಿ ಸಂಪೂರ್ಣ ಬಹುಮತದ ಸರ್ಕಾರ ರಚಿಸಿತು. ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಹಲವು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಯಿತು. ಜೆ.ಪಿ. ನಡ್ಡಾ ಅವರು ಪಕ್ಷದ ಸಂಘಟನೆಗೆ ಸ್ಥಳೀಯ ಮಟ್ಟದಲ್ಲಿ ಬಲ ತುಂಬಿದರು” ಎಂದು ಮೋದಿ ಶ್ಲಾಘಿಸಿದರು.
ನಿಕಟಪೂರ್ವ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಪಕ್ಷದೊಳಗೆ ನಡೆಸಲಾದ ಚುನಾವಣೆಯಲ್ಲಿ ನಿತಿನ್ ನಬಿನ್ ಅವರು ಅವಿರೋಧವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಹಿನ್ನೆಲೆಯಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭವು ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಯಿತು.
ಇದನ್ನೂ ಓದಿ: 3ನೇ ವರ್ಷವೂ ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲರು
ನಿತಿನ್ ನಬಿನ್ ಅವರ ಅಧ್ಯಕ್ಷತ್ವದಲ್ಲಿ ಪಕ್ಷವು ಸಂಘಟನಾತ್ಮಕವಾಗಿ ಮತ್ತಷ್ಟು ಬಲ ಪಡೆಯಲಿದೆ ಹಾಗೂ ಮುಂದಿನ ರಾಜಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು.









