ಬಳ್ಳಾರಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ 4.5 ಕೆಜಿ ಚಿನ್ನ ಕಳ್ಳತನ ಪ್ರಕರಣವು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಈ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ED) ಮಂಗಳವಾರ ಬೆಳ್ಳಂ ಬೆಳಗ್ಗೆ ಬೆಂಗಳೂರು, ಬಳ್ಳಾರಿ ಹಾಗೂ ಕೇರಳದ ತಿರುವನಂತಪುರಂ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.
ಬಳ್ಳಾರಿಯ ರೊದ್ದಂ ಜ್ಯುವೆಲರಿ ಶಾಪ್ ಹಾಗೂ ಈ ಶಾಪ್‌ನ ಮಾಲೀಕ ಗೋವರ್ದನ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಸಿಆರ್ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ಸುಮಾರು 8 ಮಂದಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿಯ ವೇಳೆ ದಾಖಲೆಗಳು, ಹಣಕಾಸು ವ್ಯವಹಾರಗಳ ಮಾಹಿತಿ ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡು ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪತ್ರಕರ್ತರ ಊಟಕ್ಕಾಗಿ 2 ಲಕ್ಷ ವಸೂಲಿ…!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೂ ಮುನ್ನ ಕೇರಳದ ವಿಶೇಷ ತನಿಖಾ ದಳ (SIT) ಪ್ರತ್ಯೇಕವಾಗಿ ದಾಳಿ ನಡೆಸಿದ್ದು, ರೊದ್ದಂ ಜ್ಯುವೆಲರಿ ಶಾಪ್ ಮಾಲೀಕ ಗೋವರ್ದನ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ತನಿಖೆಯಲ್ಲಿ ಗೋವರ್ದನ್ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅರ್ಚಕ ಉನ್ನಿಕೃಷ್ಣನ್ ಅವರ ಆಪ್ತರಾಗಿದ್ದರು ಎಂಬುದು ಬೆಳಕಿಗೆ ಬಂದಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲಿಗೆ ಚಿನ್ನದ ಲೇಪನ ಮಾಡಲಾದ ಕುಶರಿ ಕಲಸವನ್ನು ಬಳ್ಳಾರಿಯ ರೊದ್ದಂ ಜ್ಯುವೆಲರಿ ಶಾಪ್ ಮೂಲಕ ತಯಾರಿಸಲಾಗಿತ್ತು. ಇದೇ ದ್ವಾರ ಬಾಗಿಲಿನ ಚಿನ್ನದ ಲೇಪನದಿಂದ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿರುವುದು ಪ್ರಕರಣದ ಮೂಲವಾಗಿದೆ. ಈ ಅಕ್ರಮದಲ್ಲಿ ಹಣಕಾಸು ಅಕ್ರಮ, ಚಿನ್ನದ ದುರ್ಬಳಕೆ ಹಾಗೂ ಹಣ ಬಿಳುಪು ಮಾಡುವಿಕೆ ನಡೆದಿರುವ ಶಂಕೆಯ ಮೇರೆಗೆ ಇದೀಗ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿದೆ.
ಇದನ್ನೂ ಓದಿ: ಮೈಸೂರು: RFO ಕಾಂತರಾಜ್ ಚೌಹಾಣ್ ಅನುಮಾನಾಸ್ಪದ ಸಾವು
ಇಡಿ ಅಧಿಕಾರಿಗಳು ಬ್ಯಾಂಕ್ ವ್ಯವಹಾರಗಳು, ಚಿನ್ನದ ಖರೀದಿ–ಮಾರಾಟ ದಾಖಲೆಗಳು ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದು, ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳ ಪಾತ್ರವಿರುವ ಬಗ್ಗೆ ತನಿಖೆ ಮುಂದುವರಿದಿದೆ. ಶಬರಿಮಲೆ ದೇವಸ್ಥಾನದಂತಹ ಪವಿತ್ರ ಸ್ಥಳದಲ್ಲಿ ನಡೆದ ಈ ಚಿನ್ನ ಕಳ್ಳತನ ಪ್ರಕರಣವು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ ಎಂದು ತನಿಖಾ ಮೂಲಗಳು ತಿಳಿಸಿವೆ.























