ಮಂಗಳೂರು: ನಗರದ ಐತಿಹಾಸಿಕ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಆರಾಧ್ಯ ದೈವವಾದ ಶ್ರೀ ವೀರ ವೆಂಕಟೇಶ ದೇವರ ಸಹಸ್ರ ಕುಂಭಾಭಿಷೇಕ ಮಹೋತ್ಸವವು ಇಂದು ಅತ್ಯಂತ ಭಕ್ತಿಭಾವ ಹಾಗೂ ವೈಭವದಿಂದ ನೆರವೇರಿತು. ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಸಹಸ್ರಾರು ಭಜಕರ ಮತ್ತು ಭಕ್ತರ ಸಮ್ಮುಖದಲ್ಲಿ ಈ ಮಹಾ ಕುಂಭಾಭಿಷೇಕ ಜರುಗಿತು.
ಪ್ರಾತಃಕಾಲ ವಿದ್ವತ್ ವೈದಿಕರಿಂದ ಶ್ರೀದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ ನೆರವೇರಿದ ಬಳಿಕ, ವಿಶೇಷವಾಗಿ ನಿರ್ಮಿಸಲಾದ ಕುಂಭಾಭಿಷೇಕ ಮಂಡಲದಲ್ಲಿ 1008 ಬೆಳ್ಳಿ ಹಾಗೂ ತಾಮ್ರ ಕಲಶಗಳನ್ನು ಪ್ರತಿಷ್ಠಾಪಿಸಲಾಯಿತು. ನಂತರ ಕಾಶೀ ಮಠಾಧೀಶರ ಅಮೃತ ಹಸ್ತಗಳಿಂದ ಸಹಸ್ರ ಕಲಶಾಭಿಷೇಕ ನಡೆಯಿತು. ಮಂತ್ರೋಚ್ಚಾರಣೆ, ವೇದಘೋಷ ಮತ್ತು ಭಜನಾ ಸಂಕೀರ್ತನೆಗಳಿಂದ ದೇವಸ್ಥಾನ ಆವರಣ ಸಂಪೂರ್ಣ ಆಧ್ಯಾತ್ಮಿಕ ವಾತಾವರಣದಿಂದ ಕಂಗೊಳಿಸಿತು.
ಇದನ್ನೂ ಓದಿ: MCF ಹೆಸರು ಬದಲಾವಣೆಯಿಂದ ಮಂಗಳೂರಿನ ಅಸ್ಮಿತೆಗೆ ಧಕ್ಕೆ
ಯಜ್ಞಮಂಟಪದಲ್ಲಿ ಐದು ದಿನಗಳ ಕಾಲ ನಿರಂತರವಾಗಿ ನಡೆದ ವಿವಿಧ ಹೋಮ, ಹವನ ಹಾಗೂ ಯಾಗಗಳ ಅಂತಿಮ ಹಂತವಾಗಿ ಮಹಾಪೂರ್ಣಾಹುತಿ ನೆರವೇರಿತು. ಸಾಯಂಕಾಲ ಸ್ವರ್ಣ ಪಲ್ಲಕಿಯಲ್ಲಿ ಶ್ರೀದೇವರ ಹಗಲೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯಿತು. ನಂತರ ಸಮಾರಾಧನೆ ನೆರವೇರಿದ್ದು, ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ರಾತ್ರಿ ಪೂಜೆಯ ಬಳಿಕ ಶ್ರೀ ದೇವರ ಪೇಟೆ ಉತ್ಸವ, ಪ್ರಾಕಾರೋತ್ಸವ ಹಾಗೂ ವಸಂತ ಪೂಜೆಗಳು ವಿಜೃಂಭಣೆಯಿಂದ ನಡೆಯುವ ಮೂಲಕ ಸಹಸ್ರ ಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತಿಪೂರ್ಣ ಸಮಾಪ್ತಿ ದೊರೆಯಿತು. ಈ ಸಂದರ್ಭ ದೇಶ-ವಿದೇಶಗಳಿಂದ ಆಗಮಿಸಿದ ಸಾವಿರಾರು ಭಗವತ್ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧನ್ಯರಾದರು.
ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವೀನ್ ಪಕ್ಕಾ!
ಈ ಮಹೋತ್ಸವದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಕೆ. ಗಣೇಶ್ ಕಾಮತ್, ಜಗನ್ನಾಥ್ ಕಾಮತ್ ಸೇರಿದಂತೆ ಅನೇಕ ಗಣ್ಯರು ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸಮರ್ಪಿತ ಸೇವೆ, ಶಿಸ್ತಿನ ವ್ಯವಸ್ಥೆ ಹಾಗೂ ಭಕ್ತಿಪೂರ್ಣ ಆಚರಣೆಗಳಿಂದ ಈ ಸಹಸ್ರ ಕುಂಭಾಭಿಷೇಕವು ಸ್ಮರಣೀಯವಾಗಿ ಮೂಡಿಬಂದಿತು.









