ದಾಂಡೇಲಿ: ಹಾರ್ನ್‌ಬಿಲ್ ಪಕ್ಷಿಗಳ ಹಬ್ಬಕ್ಕೆ ಶುಕ್ರವಾರ ಚಾಲನೆ

0
4

ದಾಂಡೇಲಿಯಲ್ಲಿ ಜನವರಿ 16–17ರಂದು ಎರಡು ದಿನಗಳ ಅದ್ದೂರಿ ಆಚರಣೆ

ದಾಂಡೇಲಿ (ಉತ್ತರ ಕನ್ನಡ): ರಾಜ್ಯದಲ್ಲೇ ದಾಂಡೇಲಿಯಲ್ಲಿ ಮಾತ್ರ ಆಯೋಜಿಸಲಾಗುವ ಶುದ್ಧ ಪರಿಸರ ಮತ್ತು ಜೀವವೈವಿಧ್ಯದ ಸಂಕೇತವಾಗಿರುವ ಹಾರ್ನ್‌ಬಿಲ್ ಪಕ್ಷಿಗಳ ಹಬ್ಬಕ್ಕೆ ನಾಳೆ ಶುಕ್ರವಾರ ಚಾಲನೆ ನೀಡಲಾಗುತ್ತದೆ ಎಂದು ಹಳಿಯಾಳ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ ಕೆ.ಸಿ. ಅವರು ತಿಳಿಸಿದ್ದಾರೆ.

ಜನವರಿ 16 ಮತ್ತು 17ರಂದು ನಡೆಯಲಿರುವ ಈ ಅದ್ದೂರಿಯ ಹಬ್ಬವು ದಾಂಡೇಲಿಯ ಸರ್ಕಾರಿ ಮರಮುಟ್ಟುಗಳ ಕೋಠಿ ಆವರಣದಲ್ಲಿರುವ ಹಾರ್ನ್‌ಬಿಲ್ ಭವನದಲ್ಲಿ ಮುಂಜಾನೆ 11 ಗಂಟೆಗೆ ಆರಂಭಗೊಳ್ಳಲಿದೆ.

ಇದನ್ನೂ ಓದಿ:  ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’

ದೇಶ–ವಿದೇಶಗಳಿಂದ ಪರಿಸರ ಆಸಕ್ತರ ಆಗಮನ: ಹಾರ್ನ್‌ಬಿಲ್ ಪಕ್ಷಿಗಳ ಹಬ್ಬಕ್ಕೆ ಸ್ಥಳೀಯ ನಾಗರಿಕರೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಇತರ ರಾಜ್ಯಗಳಿಂದ ಪಕ್ಷಿವೀಕ್ಷಕರು, ತಜ್ಞರು, ಸಂಶೋಧಕರು ಮತ್ತು ಪರಿಸರಾಸಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಪಕ್ಷಿಗಳ ಸಂರಕ್ಷಣೆ, ಅರಣ್ಯ ಸಂಪತ್ತು ಹಾಗೂ ಪರಿಸರ ಸಮತೋಲನದ ಮಹತ್ವವನ್ನು ಸಾರುವ ಈ ಹಬ್ಬವು ದಾಂಡೇಲಿಯ ವಿಶೇಷ ಗುರುತಾಗಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುತ್ತಿದೆ.

ಗಣ್ಯರಿಂದ ಉದ್ಘಾಟನೆ ಮತ್ತು ಅಧ್ಯಕ್ಷತೆ: ಈ ಹಬ್ಬವನ್ನು ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ, ಅರಣ್ಯ–ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕಾರವಾರ ಶಾಸಕ ಸತೀಶ ಕೃಷ್ಣ ಸೈಲ್ ಅವರು ಗೌರವ ಉಪಸ್ಥಿತರಾಗಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:  ಗಿಲೆನ್–ಬಾರಿ ಸಿಂಡ್ರೋಮ್ ರೋಗಿಗಳಿಗೆ ದುಬಾರಿ ಚಿಕಿತ್ಸೆ ಉಚಿತ

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಸೇರಿದಂತೆ ಜಿಲ್ಲೆಯ ಇತರ ವಿಧಾನಸಭಾ ಕ್ಷೇತ್ರಗಳ ಶಾಸಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಹಲವಾರು ಅಧಿಕಾರಿಗಳು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಾಥಾ, ಉಪನ್ಯಾಸ, ಪಕ್ಷಿವೀಕ್ಷಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು: ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ನಡೆಯುವ ಹಾರ್ನ್‌ಬಿಲ್ ಹಬ್ಬದಲ್ಲಿ ಹಾರ್ನ್‌ಬಿಲ್ ಜಾಥಾ, ತಜ್ಞರಿಂದ ಪರಿಸರ ಹಾಗೂ ಪಕ್ಷಿ ಸಂರಕ್ಷಣೆಯ ಕುರಿತು ಉಪನ್ಯಾಸಗಳು, ಪಕ್ಷಿವೀಕ್ಷಣಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ:  ಅಂಕಣ ಬರಹ: ಗನ್ ಸಂಸ್ಕೃತಿ ಅಟ್ಟಹಾಸದಲ್ಲಿ ಬಳ್ಳಾರಿಗೆಲ್ಲಿದೆ ನೆಮ್ಮದಿ?

ಭಾಗವಹಿಸಲು ಆಹ್ವಾನ: ಪರಿಸರ ಸಂರಕ್ಷಣೆ ಹಾಗೂ ಪಕ್ಷಿಗಳ ಮಹತ್ವವನ್ನು ಜನರಲ್ಲಿ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ಹಬ್ಬದಲ್ಲಿ ಸ್ಥಳೀಯರು ಹಾಗೂ ಇತರ ಪ್ರದೇಶಗಳ ಪರಿಸರಾಸಕ್ತರು, ಪಕ್ಷಿವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ ಕೆ.ಸಿ. ಅವರು ಮನವಿ ಮಾಡಿದ್ದಾರೆ.

Previous articleಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’