ಯಾದಗಿರಿ: ಜಿಲ್ಲೆಯ ಮೈಲಾಪುರದಲ್ಲಿ ನಡೆಯುವ ಮಲ್ಲಯ್ಯನ ಜಾತ್ರಾ ಮಹೋತ್ಸವಕ್ಕೆ ಇಂದು ಅಪಾರ ಭಕ್ತಿ, ಸಂಭ್ರಮ ಮತ್ತು ಜನಸಾಗರದ ಮಧ್ಯೆ ಅದ್ದೂರಿಯಾಗಿ ಚಾಲನೆ ದೊರೆಯಿತು. “ಏಳು ಕೋಟಿ… ಏಳು ಕೋಟಿ… ಕೋಟಿಘೇ…” ಎಂಬ ಭಕ್ತರ ಘೋಷಣೆಯ ನಡುವೆ ಕೈಯಲ್ಲಿದ್ದ ಭಂಡಾರ (ಅರಿಷಿಣ ಪುಡಿ)ವನ್ನು ಮಲ್ಲಯ್ಯನ ಪಲ್ಲಕ್ಕಿಗೆ ಎರಚುತ್ತಾ ಲಕ್ಷಾಂತರ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು.
ಗುಹಾಂತರ ದೇವಾಲಯವಿರುವ ಬೆಟ್ಟದ ಮೇಲೆ, ಸುತ್ತಮುತ್ತಲ ದೊಡ್ಡ ಬಂಡೆಗಳ ಮೇಲೆ, ಕಟ್ಟಡಗಳ ಮೆಟ್ಟಿಲುಗಳ ಮೇಲೆ, ಅಂಗಡಿ-ಮುಂಗಟ್ಟುಗಳ ಮೇಲೆಯೇ ನಿಂತು ಭಕ್ತರು ಜಾತ್ರೆಯ ವೈಭವವನ್ನು ಕಣ್ತುಂಬಿಕೊಂಡರು. ಎಲ್ಲಿ ನೋಡಿದರೂ ಜನಸಂದಣಿ, ಭಕ್ತಿ ಮತ್ತು ಉನ್ಮಾದದ ವಾತಾವರಣ ಆವರಿಸಿಕೊಂಡಿತ್ತು.
ಇದನ್ನೂ ಓದಿ: ಆತ್ಮ ಜಾಗೃತಿಯ ಪರ್ವ ಸಂಕ್ರಾಂತಿ ಹಬ್ಬ ವಿಡಿಯೋ ನೋಡಿ: ಮಕರ ಸಂಕ್ರಾತಿ ಎಳ್ಳು ಬೆಲ್ಲ ವಿಶೇಷತೆ
ಸಂಕ್ರಾಂತಿ ಹಬ್ಬದ ಸಂಭ್ರಮ – ದೇಶದ ನಾನಾ ಕಡೆಗಳಿಂದ ಭಕ್ತರ ಹರಿವು: ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ದಿನದಂದು ನಡೆಯುವ ಮಲ್ಲಯ್ಯನ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದಲೂ ಅಪಾರ ಸಂಖ್ಯೆಯ ಭಕ್ತರು ಹರಿದುಬಂದರು.
ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ಯಾದಗಿರಿ ರೈಲು ನಿಲ್ದಾಣಕ್ಕೆ ಆಗಮಿಸಿದ ಎಲ್ಲಾ ರೈಲುಗಳು ಹಾಗೂ ಬಸ್‌ಗಳು ಕಿಕ್ಕಿರಿದು ತುಂಬಿದ್ದವು. ರೈಲು ನಿಲ್ದಾಣಕ್ಕೆ ಬಂದಿಳಿದ ಭಕ್ತರು ಬಸ್, ಜೀಪು, ಲಾರಿ ಹಾಗೂ ಟಂಟಂ ವಾಹನಗಳಲ್ಲಿ ಟಾಪ್ ಪ್ರಯಾಣ ಮಾಡಿ ಮೈಲಾಪುರದತ್ತ ಸಾಗಿದರು.
ಇದನ್ನೂ ಓದಿ: ಕೆ.ಎಲ್.ರಾಹುಲ್ ಶತಕದ ಮೆರುಗು: ನ್ಯೂಜಿಲೆಂಡ್ ವಿರುದ್ಧ ಭಾರತ 284 ರನ್‌ಗಳ ಸವಾಲಿನ ಮೊತ್ತ
ಗಂಗಾ ಸ್ನಾನಕ್ಕೆ ಪಲ್ಲಕ್ಕಿ ಯಾತ್ರೆ: ಇಂದು ಮಧ್ಯಾಹ್ನ 12 ಗಂಟೆಯ ನಂತರ ಗುಹಾಂತರ ದೇವಾಲಯದಿಂದ ಮಲ್ಲಯ್ಯನ ಪಲ್ಲಕ್ಕಿ, ಸಕಲ ವಾದ್ಯ-ವೈಭವಗಳೊಂದಿಗೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಹೊನ್ನಕೆರೆಯತ್ತ ಗಂಗಾಸ್ನಾನಕ್ಕೆ ತೆರಳಿತು. ಗಂಗಾಸ್ನಾನ ಮುಗಿಸಿ ಪಲ್ಲಕ್ಕಿ ಮರಳುವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಲ್ಲಕ್ಕಿಯ ಮೇಲೆ ಭಂಡಾರ ಎರಚಿ, ತಮ್ಮ ಮನದಾಳದ ಭಕ್ತಿಯನ್ನು ಅರ್ಪಿಸಿದರು.
ಡೊಳ್ಳು ಕುಣಿತ, ಢೋಲಕ್ ನಾದಕ್ಕೆ ತಕ್ಕಂತೆ ವಗ್ಗರು ಹಾಗೂ ಪೂಜಾರಿಗಳು ಹೆಜ್ಜೆ ಹಾಕುತ್ತಾ ಮೈಮರೆತರು. ಇವರೊಂದಿಗೆ ಭಕ್ತರೂ ಉನ್ಮಾದದಿಂದ ಕುಣಿಯುತ್ತಾ ಸಾಗಿದ ದೃಶ್ಯ ಜಾತ್ರೆಯ ವೈಭವವನ್ನು ಇನ್ನಷ್ಟು ಹೆಚ್ಚಿಸಿತು.
ಇದನ್ನೂ ಓದಿ: ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ಕಿಂಗ್
ಗಣ್ಯರ ಉಪಸ್ಥಿತಿ: ಜಾತ್ರಾ ಮಹೋತ್ಸವದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ್, ಎಸ್ಪಿ ಪೃಥ್ವಿಕ್ ಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಮಲ್ಲಯ್ಯನ ದರ್ಶನ ಪಡೆದರು.
ಮೈ ನವಿರೇಳಿಸುವ ಕ್ಷಣ – ಸರಪಳಿ ತುಂಡರಿಸುವ ವಿಶೇಷ ವಿಧಿ: ಮೈಲಾರ ಲಿಂಗೇಶ್ವರ ಜಾತ್ರೆಯ ಪ್ರಮುಖ ವೈಶಿಷ್ಟ್ಯವೆಂದರೆ ಸರಪಳಿ ತುಂಡರಿಸುವ ಅಪರೂಪದ ಸಂಪ್ರದಾಯ. ಮಲ್ಲಯ್ಯ ಗಂಗಾಸ್ನಾನದಿಂದ ವಾಪಸ್ಸಾಗಿ ಗರ್ಭಗುಡಿ ಪ್ರವೇಶಿಸುವ ಮುಖ್ಯ ಧ್ವಾರದಲ್ಲಿ, ವಿಶೇಷ ವಸ್ತ್ರಧಾರಿಗಳಾಗಿದ್ದ ಪೂಜಾರಿಗಳು ಸರಪಳಿಯನ್ನು ತುಂಡರಿಸಿದ ಕ್ಷಣ ಭಕ್ತರಲ್ಲಿ ಭಕ್ತಿಯ ಪರಾಕಾಷ್ಠೆ ಉಕ್ಕಿಬಂದಿತು.
ಇದನ್ನೂ ಓದಿ: ಜ.17ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ
ಸರಪಳಿ ತುಂಡಾಗುತ್ತಿದ್ದಂತೆಯೇ “ಏಳು ಕೋಟಿ… ಏಳು ಕೋಟಿ ಕೋಟಿಘೇ…” ಎಂಬ ಘೋಷಣೆಗಳಿಂದ ಇಡೀ ಪ್ರದೇಶ ಝೇಂಕಾರಗೊಂಡಿತು. ಭಕ್ತರು ಕೈ ಮುಗಿದು ಕೃತಾರ್ಥರಾದರು. ಅನಂತರ ಮಲ್ಲಯ್ಯ ಗರ್ಭಗುಡಿಗೆ ಪ್ರವೇಶಿಸಿದಾಗ, ಮಕ್ಕಳು-ಹಿರಿಯರೊಂದಿಗೆ ಅಲ್ಲಿದ್ದ ಭಕ್ತರು ಕಾಯಿ, ಕರ್ಪೂರ ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ದೇವರ ಮುಂದೆ ನಿವೇದಿಸಿದರು.
ಭಕ್ತಿ, ಸಂಪ್ರದಾಯ, ಸಂಸ್ಕೃತಿ ಮತ್ತು ಜನಸಾಗರದ ಸಂಗಮವೇ ಮೈಲಾಪುರದ ಮಲ್ಲಯ್ಯನ ಜಾತ್ರೆ ಎಂಬುದನ್ನು ಈ ದಿನದ ದೃಶ್ಯಗಳು ಮತ್ತೊಮ್ಮೆ ಸಾಬೀತುಪಡಿಸಿವೆ.









