ಬಳ್ಳಾರಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ(ಮನ್ರೇಗಾ) ಯೋಜನೆ ಹೆಸರು ಬದಲಾವಣೆ ಮಾಡುತ್ತಿರುವ ಬಿಜೆಪಿ ಮುಂದಿನ ದಿನಗಳಲ್ಲಿ ನೋಟಿನಲ್ಲಿರುವ ಮಹಾತ್ಮ ಗಾಂಧಿ ಅವರ ಫೋಟೊ ಸಹ ಬದಲಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ಖಾನ್ ಆತಂಕ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುಪಿಎ ಆಡಳಿತಾವಧಿಯಲ್ಲಿ ಮನ್ರೇಗಾ ಜಾರಿಗೊಳಿಸಲಾಗಿತ್ತು. ಈ ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನು ಇಡಲಾಗಿತ್ತು. ಆದರೆ, ಬಿಜೆಪಿ ಬದಲಾವಣೆ ಮಾಡಲು ಹೊರಟಿದೆ. ಮನ್ರೇಗಾ ಬದಲಾಗಿ ಜಿ ರಾಮ್ ಜೀ ಮಾಡಲು ಉದ್ದೇಶಿಸಿದ್ದು ಖಂಡನೀಯ. ಇದನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಇರಾನ್ ಕರೆನ್ಸಿ ಭಾರೀ ಕುಸಿತ: 1 ಡಾಲರ್ 10,92,500 ರಿಯಾಲ್‌ಗೆ ಸಮ
ಮನ್ರೇಗಾ ಹೆಸರು ಬದಲಾವಣೆ ಖಂಡಿಸಿ ವಿಶೇಷ ಕ್ಯಾಬಿನೆಟ್ ನಡೆದಿದೆ. ಹತ್ತು ದಿನಗಳ ಅಧಿವೇಶನದಲ್ಲೂ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟವನ್ನೂ ಮಾಡಲಾಗುವುದು ಎಂದು ಹೇಳಿದರು.
ಐದು ವರ್ಷ ಸಿದ್ದರಾಮಯ್ಯ ಸಿಎಂ: ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂಯಾಗಿ ಪೂರೈಸಲಿದ್ದಾರೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ನಮ್ಮಲ್ಲಿ ಚರ್ಚೆಯೇ ನಡೆದಿಲ್ಲ. ನವೆಂಬರ್ ಕ್ರಾಂತಿ, ಬಳಿಕ ಡಿಸೆಂಬರ್ ಕ್ರಾಂತಿ, ಈಗ ಬಿಜೆಪಿ ನಾಯಕರು ಸಂಕ್ರಾಂತಿ ಕ್ರಾಂತಿ ಎನ್ನುತ್ತಿದ್ದಾರೆ. ಸರ್ಕಾರದಲ್ಲಿ ಯಾವ ಕ್ರಾಂತಿ, ಭ್ರಾಂತಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.









