VB-G RAM G ಕಾಯ್ದೆ ಹಿಂಪಡೆಯಲು ಪ್ರಧಾನಿ‌ ಮೋದಿಗೆ ಆಗ್ರಹ

0
5

ಇದು ಗುಜರಾತ್ ಅಲ್ಲ, ಬಸವಣ್ಣನ ನಾಡು: ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಅಗತ್ಯ

ಸಂ‌. ಕ. ಸಮಾಚಾರ ಕಲಬುರಗಿ: ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಂತೆ, ಈಗ ಜಾರಿಯಲ್ಲಿರುವ ವಿಬಿ ಜಿ ರಾಮ ಜಿ ಕಾಯ್ದೆಯನ್ನೂ ಕೂಡ ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದರೆ ಜನರು ಬೀದಿಗೆ ಇಳಿಯುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಎಚ್ಚೆತ್ತುಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಎಚ್ಚರಿಕೆ ನೀಡಿದರು.

ಜೇವರ್ಗಿ ವಿಧಾನಸಭಾ ಕ್ಷೇತ್ರದ ಯಡ್ರಾಮಿ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೆ ಕೆ ಆರ್ ಡಿ ಬಿ ಆಶ್ರಯದಲ್ಲಿ ಪ್ರಜಾಸೌಧ, ಕೆಪಿಎಸ್ ಶಾಲೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೀತಿಗಳನ್ನು ತೀವ್ರವಾಗಿ ಖಂಡಿಸಿದರು.

ಇದನ್ನೂ ಓದಿ:  ಕೋಗಿಲು ಬಡಾವಣೆ ಪ್ರಕರಣ: BJP ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ

ಬಡವರ ಕಲ್ಯಾಣಕ್ಕಾಗಿ ರೂಪಿಸಿದ್ದ ಮಹತ್ವದ ಮನರೇಗಾ ಯೋಜನೆಯನ್ನು ಇದೀಗ ವಿಬಿ ಜಿ ರಾಮ ಜಿ ಯೋಜನೆಯಾಗಿ ಬದಲಾಯಿಸಲಾಗಿದೆ. ಇದರಿಂದ ಬಡವರ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರಗಳು ಬಡವರ ಹೊಟ್ಟೆ ತುಂಬುವ ಕೆಲಸ ಮಾಡಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಬಡವರ ಹೊಟ್ಟೆ ಮೇಲೆ ಒಡೆಯುವ ಕೆಲಸ ಮಾಡುತ್ತಿದೆ ಎಂದು ಖರ್ಗೆ ಟೀಕಿಸಿದರು.

ಜನವಿರೋಧಿ ಕಾನೂನುಗಳು ಮತ್ತು ಯೋಜನೆಗಳ ವಿರುದ್ಧ ಸಾರ್ವಜನಿಕರು ಸಂಘಟಿತರಾಗಿ ಪ್ರತಿರೋಧಿಸಬೇಕು ಎಂದು ಕರೆ ನೀಡಿದ ಅವರು, ಒಂದೊಂದೇ ಕಾನೂನು ಮತ್ತು ಯೋಜನೆಗಳನ್ನು ಕಸಿದುಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ದೂರಿದರು. ಮೂರು ಕೃಷಿ ಕಾಯ್ದೆಗಳಂತೆ ವಿಬಿ ಜಿ ರಾಮ ಜಿ ಕಾಯ್ದೆಯನ್ನೂ ಹಿಂಪಡೆಯುವ ಪರಿಸ್ಥಿತಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ:  ಸಕ್ಕರೆ ಕಾರ್ಖಾನೆಯ ಕ್ರಶಿಂಗ್ ಬೆಲ್ಟ್‌ಗೆ ಸಿಲುಕಿ ದಿನಗೂಲಿ ಕಾರ್ಮಿಕ ಸಾವು

ಸಂವಿಧಾನವೇ ನಮ್ಮ ಆಧಾರ: ದೇವಾಲಯಗಳಿಗೆ ಹೋಗಿ ಗಂಟೆ, ಜಾಗಟೆ ಬಾರಿಸಿದರೆ ದೇಶದ ಅಭಿವೃದ್ಧಿ ಆಗುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಕೈಗಾರಿಕೆಗಳನ್ನು ತರಬೇಕಾಗಿದ್ದ ಸರ್ಕಾರ, ಜನಕಲ್ಯಾಣವನ್ನು ಕಡೆಗಣಿಸಿ ದೇವರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದೆ ಎಂದು ಖರ್ಗೆ ಆರೋಪಿಸಿದರು. ಕೊನೆಗೆ ದೇವರೇ ಜನರ ಕಲ್ಯಾಣ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಯೋಧ್ಯೆ ರಾಮ ಮಂದಿರ ನಿರ್ಮಿಸಲಾಗಿದೆ ಎಂದು ಹೇಳಿದ ಅವರು, ಅಸ್ಸಾಂ, ತಮಿಳುನಾಡು, ಪಾಂಡಿಚೆರಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿರುವಾಗ ಸೋಮನಾಥ ದೇವಾಲಯದ ಜೀರ್ಣೋದ್ಧಾರದ ನೆನಪು ಸರ್ಕಾರಕ್ಕೆ ಬಂದಿದೆ. ಇಷ್ಟು ವರ್ಷಗಳ ಹಿಂದೆ ಏಕೆ ಈ ವಿಚಾರ ನೆನಪಾಗಲಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:  ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರ ಪಾಲಿಕೆಗಳ ಚುನಾವಣೆಗೆ ದಿನಾಂಕ ಫಿಕ್ಸ್‌

ಇದು ಗುಜರಾತ್ ಅಲ್ಲ, ಬಸವಣ್ಣನ ನಾಡು: ಪಂಚಾಯತ್ ಮಟ್ಟದ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಥಳೀಯ ಆಡಳಿತಕ್ಕೆ ಅಧಿಕಾರ ಇತ್ತು. ಆದರೆ ಈಗ ಪ್ರತಿಯೊಂದು ಕಾಮಗಾರಿಗೂ ಪ್ರಧಾನಿ ಮೋದಿ ಅವರೇ ಒಪ್ಪಿಗೆ ನೀಡಬೇಕು ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಖರ್ಗೆ, ಇದು ಗುಜರಾತ್ ಅಲ್ಲ, ಜಗಜ್ಯೋತಿ ಬಸವಣ್ಣನ ನಾಡು ಎಂದು ಹೇಳಿದರು. ಜನರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ಸಂವಿಧಾನ ಇರುವುದರಿಂದಲೇ ಜನರಿಗೆ ಮಾತಾಡುವ ಸ್ವಾತಂತ್ರ್ಯ ಸಿಕ್ಕಿದೆ. ಸಂವಿಧಾನ ವಿರೋಧಿ ಕಾರ್ಯಗಳ ವಿರುದ್ಧ ಪ್ರತಿಭಟಿಸದಿದ್ದರೆ ಸಂವಿಧಾನವೇ ಕೊಲೆ ಆಗುವ ಅಪಾಯವಿದೆ ಎಂದು ಎಚ್ಚರಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಅಭಿವೃದ್ಧಿ ಅಗತ್ಯ: ಕಲ್ಯಾಣ ಕರ್ನಾಟಕ ಭಾಗ ಅಮೆರಿಕ ಅಥವಾ ಸಿಂಗಾಪುರ ಆಗಬೇಕಿಲ್ಲ. ಮೈಸೂರು, ಚನ್ನಪಟ್ಟಣ ಮಾದರಿಯಲ್ಲಿ ಉತ್ತಮ ಅಭಿವೃದ್ಧಿ ಸಾಕು. ನಮ್ಮ ಭಾಗದ ಶೇ.75ರಷ್ಟು ಅಭಿವೃದ್ಧಿ ಕಾರ್ಯಗಳು ನಡೆದರೆ ಸಮಗ್ರ ಪ್ರಗತಿ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸರ್ಕಾರಕ್ಕೆ ತೊಂದರೆ ಎದುರಾಗಲಿದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:  2020–21ರ ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಪ್ರಕಟ

ಅಭಿವೃದ್ಧಿ ಕಾಮಗಾರಿಗಳಿಗಿಂತಲೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಒತ್ತಾಯಿಸಿದ ಖರ್ಗೆ, ಈ ಭಾಗದಲ್ಲಿ ಖಾಲಿ ಉಳಿದಿರುವ ಸುಮಾರು 10 ಸಾವಿರ ಶಿಕ್ಷಕರ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ನಂತರ ರಾಜ್ಯಮಟ್ಟದ ಶಿಕ್ಷಕ ನೇಮಕಾತಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದರೆ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

Previous article2020–21ರ ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಪ್ರಕಟ