ನದಿ ತಿರುವು ಯೋಜನೆಯ ವೈಜ್ಞಾನಿಕ ಅಧ್ಯಯನ ನಡೆಯಲಿ

0
42

ಶಿರಸಿ: ನಾವು ಗೊಡ್ಡು ಪರಿಸರವಾದಿಗಳಲ್ಲ, ಅಭಿವೃದ್ಧಿ ವಿರೋಧಿ ಪರಿಸರವಾದಿಗಳಲ್ಲ, ಪ್ರಾಚೀನ ಚಿಂತನೆ ಇರಲಿ, ವೈಜ್ಞಾನಿಕ ಚಿಂತನೆ ಇರಲಿ, ಹಳೆಬೇರು, ಹೊಸ ಚಿಗುರು ಮುನ್ನಡೆಯಲಿ. ಈ ಯೋಜನೆ ಅವೈಜ್ಞಾನಿಕವಾದುದಾಗಿದೆ. ಈ ನದಿಗಳು ಚಿಕ್ಕ ಹರಿವಿನ ನದಿಗಳು, ಕೆಲ ನದಿಗಳಂತೆ ನೂರಾರು ಕಿ.ಮೀ. ಹರಿಯುವುದಿಲ್ಲ. ಬೇಸಿಗೆಯಲ್ಲಿ ಹರಿಯುವುದಿಲ್ಲ. ಈ ನದಿಗಳನ್ನು ಎತ್ತಿ ಒಯ್ಯಲು ಸಾಧ್ಯವಿಲ್ಲ ಎಂದು ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು.

ಎಂಇಎಸ್ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಕೈಬಿಟ್ಟು ಪಶ್ಚಿಮ ಘಟ್ಟ ಸಂರಕ್ಷಿಸಲು ಆಗ್ರಹಿಸಿ ಬೃಹತ್ ಜನ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ, ಬಯಲು ಪ್ರದೇಶದ ನದಿಗಳನ್ನು ಸೇರಿಸಬಹುದು, ತಿರುಗಿಸಬಹುದು. ಆದರೆ ಘಟ್ಟದ ಪ್ರದೇಶದಲ್ಲಿ ಹರಿಯುವ ನದಿಗಳನ್ನು ತಿರುಗಿಸುವುದು ಅಸಾಧ್ಯ ಹಾಗೂ ವೆಚ್ಚದಾಯಕವಾಗಲಿದೆ. ವಿದ್ಯುತ್ ವ್ಯಯವಾಗಲಿದೆ ಎಂದರು.

ನದಿ ನೀರಿನ ಪಾತ್ರದಲ್ಲಿ ಬದುಕಿದೆ. ನೀರಿನ ಬಳಕೆ ಆಗುತ್ತಿದೆ. ಇಲ್ಲಿಂದ ನೀರು ಸಾಗಿಸಿದರೆ ಈ ಭೂಮಿ ಬರಡಾಗುತ್ತದೆ. ಇಲ್ಲಿಯ ಬೆಳೆ, ಅರಣ್ಯ ಈ ನದಿಗಳ ನೀರನ್ನು ಅವಲಂಬಿಸಿದೆ. ಇಲ್ಲಿಯ ಪರಿಸರದ ಮೇಲಾಗುವ ದುಷ್ಪರಿಣಾಮದ ವೈಜ್ಞಾನಿಕ ಅಧ್ಯಯನ ಆಗಿದೆ. ಇಲ್ಲಿಯ ಪರಿಸರ ಉಳಿಸಲು ಎಲ್ಲರೂ ಬನ್ನಿ ಎಂದು ಆಹ್ವಾನಿಸುತ್ತೇವೆ ಎಂದರು.

ಇದನ್ನೂ ಓದಿ: ಬಳ್ಳಾರಿ ಗಲಭೆ ಪ್ರಕರಣ: CBI ತನಿಖೆಗೆ ವಹಿಸಿದರೆ ಮಾತ್ರ ನ್ಯಾಯ

ಈ ಯೋಜನೆ ವ್ಯರ್ಥವಾದರೆ ಇಲ್ಲಿಯ ಪರಿಸರ, ಬದುಕನ್ನು ಮತ್ತೆ ಕಟ್ಟಿ ಕೊಡುತ್ತೀರಾ. ಅರಣ್ಯ ಅತಿಕ್ರಮಣದಾರರು ಎಲ್ಲೋ ಬದುಕು ಕಟ್ಟಿಕೊಂಡಿದ್ದಾರೆ. ಅವರ ಬದುಕಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲವೇ. ಶರಾವತಿ ಪಂಪ್ಡ್ ಸ್ಟೋರೇಜ್ ಸಮಸ್ಯೆ ದೂರ ಮಾಡಲು ನಿರ್ಧರಿಸಿ ವಿರೋಧಿಸಬೇಕು. ಈ ಹೋರಾಟ ಯಾರ ವಿರುದ್ಧ, ಯಾವ ಪಕ್ಷದ ವಿರುದ್ಧವೂ ಅಲ್ಲ. ವಿರೋಧ ನಮಗೆ ಯೋಜನೆ ಬೇಡ ಎಂದಷ್ಟೇ ಹೇಳಿದ್ದಲ್ಲ, ಜಿಲ್ಲೆಗೆ ಏನು ಅಭಿವೃದ್ಧಿ ಬೇಕು ಎನ್ನುವುದನ್ನು ಹೇಳಿದ್ದೇವೆ. ಜೀವವೈವಿಧ್ಯ ನಾಶಕ್ಕೆ ಅವಕಾಶ ಇಲ್ಲದಂತೆ ಅಂತರ್ಜಲ ಅಭಿವೃದ್ಧಿ, ನೀರಾವರಿ, ಜಲವಿದ್ಯುತ್ ಮಾಡಬೇಕು ಎಂದರು.

ನದಿಗಳೂ ಜೀವಗಳೇ, ಅವು ದೇವತೆಗಳು, ಅವುಗಳಿಗೆ ಪರಮಾತ್ಮ ಹರಿಯುವ ಸಾಮರ್ಥ್ಯ ನೀಡಿದ್ದಾರೆ. ಪೂರ್ವ, ಪಶ್ಚಿಮಕ್ಕೆ ಯಾವುದು ಹರಿಯಬೇಕೆನ್ನುವ ನಿಯೋಜನೆ ಭಗವಂತನದು. ಹರಿಯುವ ಸ್ವಾತಂತ್ರ್ಯ ನದಿಗಿದೆ ಎಂದರು.

ಜನಪ್ರತಿನಿಧಿಗಳಲ್ಲಿ ಚರ್ಚೆ ಇರಲಿ, ಒಗ್ಗಟ್ಟಿರಲಿ. ಒಗ್ಗಟ್ಟಾಗದಿದ್ದರೆ ಮುಂದೆ ಸಾಮೂಹಿಕವಾಗಿ ಜಿಲ್ಲೆಯ ಜನ ಚುನಾವಣೆ ಬಹಿಷ್ಕಾರಿಸುವ ವೈಜ್ಞಾನಿಕವಾದ ಚಿಂತನೆ ಮಾಡಬೇಕು. ವಿಜ್ಞಾನಿಗಳ ಮೇಲೆ ಪ್ರಭಾವಬೀರದೇ ಅವರ ಬೇರ ವಾಸ್ತವ ಚಿಂತನೆಗೆ ಮಹತ್ವ, ಕಾನೂನಿಗೆ ಮಹತ್ವ ನೀಡಬೇಕು. ಇದು ಜೀವವೈವಿಧ್ಯ ವಲಯ ಎನ್ನುವ ಕಾನೂನಿದೆ ಎಂದರು.

ಇದನ್ನೂ ಓದಿ: ವರದಾ – ಬೇಡ್ತಿ ಜೋಡಣೆ ಗೊಂದಲ ನಿವಾರಣೆ ಸರ್ಕಾರ ಸಭೆ ಕರೆಯಲಿ

ಪಶ್ಚಿಮ ಘಟ್ಟ ಉಳಿದರೆ ಮಾತ್ರ ಜಗತ್ತಿನ ಹವಾಮಾನ ಸಮತೋಲನ ಉಳಿಯಲು ಸಾಧ್ಯ ಎನ್ನುವ ವರದಿ ವಿಜ್ಞಾನಿಗಳಿಂದ ಇದೆ. ಅದಕ್ಕೆ ಗಮನ ನೀಡಬೇಕು. ಪಶ್ಚಿಮ ಘಟ್ಟಕ್ಕೆ ಸಮಸ್ಯೆ ಆದರೆ ಜಗತ್ತಿ ಕತ್ತಲಲ್ಲಿ ಮುಳುಗಲಿದೆ. ವೈಜ್ಞಾನಿಕತೆ, ಕಾನೂನು, ಜನಬೆಂಬಲ ಸೇರಿದರೆ ಎಲ್ಲವನ್ನು ಗೆಲ್ಲಬಹುದು ಎಂದರು.

ಶ್ರೀಸಂಸ್ಥಾನ ಶ್ರೀಮನ್ನೆಲೆಮಾವು ಮಠ ಶ್ರೀ ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮಿಗಳು, ಸೋಂದಾ ಶ್ರೀ ಕ್ಷೇತ್ರ ಸ್ವಾದೀ ದಿಗಂಬರ ಜೈನ ಮಠಪ.ಪೂ. ಸ್ವಸ್ತಿಶ್ರೀ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಸೊರಬ ತಾಲೂಕು ಶ್ರೀ ಕ್ಷೇತ್ರ ಸಂಸ್ಥಾನ ಮಠ, ಜಡೆ ಮ.ನಿ.ಪ್ರ. ಡಾ. ಮಹಾಂತ ಮಹಾಸ್ವಾಮಿಗಳು, ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಅಶ್ರಮ ಪ.ಪೂ. ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸಿದ್ದರು.

ತಜ್ಞ ಉಪನ್ಯಾಸಕಾರರಾದ ಶಿವಮೊಗ್ಗದ ಪರಿಸರ ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ಶಾಂತಾರಾಮ ಸಿದ್ದಿ ಹಾಗೂ ಇತರರು ಉಪಸ್ಥಿತರಿದ್ದರು. ಸುಮಾರು 20 ಸಾವಿರಕ್ಕಿಂತ ಹೆಚ್ಚು ಸಾರ್ವಜನಿಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Previous articleಗುಜರಾತ್‌ನಲ್ಲಿ 7 ಲಕ್ಷ ಕೋಟಿ ಹೂಡಲಿರುವ ರಿಲಯನ್ಸ್