ದಾಂಡೇಲಿ (ಉತ್ತರ ಕನ್ನಡ): ಮಾನವ–ಆನೆ ಸಂಘರ್ಷವನ್ನು ತಗ್ಗಿಸುವ ಉದ್ದೇಶದಿಂದ ದಾಂಡೇಲಿ ಸಮೀಪದ ಕುಳಗಿ ಪ್ರಕೃತಿ ಧಾಮದಲ್ಲಿ ಎರಡು ದಿನಗಳ ಕಾಲ ವಿಶೇಷ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಗಾರವನ್ನು ಹಾವೇರಿ ಮತ್ತು ಧಾರವಾಡ ಅರಣ್ಯ ವಿಭಾಗಗಳ ಸಹಯೋಗದಲ್ಲಿ, ವನ್ಯಜೀವಿ ಸಂಶೋಧನಾ ಮತ್ತು ಸಂರಕ್ಷಣಾ ಸೊಸೈಟಿ (WRC)ಯ ಆಶ್ರಯದಲ್ಲಿ ನಡೆಸಲಾಯಿತು.
ಕಾರ್ಯಾಗಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ವನ್ಯಜೀವಿ ತಜ್ಞರು ಹಾಗೂ ಯೋಜನಾ ನಿರ್ವಹಕರು ಭಾಗವಹಿಸಿ ಮಾನವ–ಆನೆ ಸಂಘರ್ಷದಿಂದ ಉಂಟಾಗುವ ಸಮಸ್ಯೆಗಳು ಮತ್ತು ಅವುಗಳಿಗೆ ಅನುಸರಿಸಬಹುದಾದ ತಡೆ ಕ್ರಮಗಳ ಕುರಿತು ವಿಸ್ತಾರವಾಗಿ ಚರ್ಚಿಸಿದರು.
ಇದನ್ನೂ ಓದಿ: ಬಿಜೆಪಿ ಉಪಾಧ್ಯಕ್ಷ ಆತ್ಮಹತ್ಯೆಗೆ ಶರಣು
ಈ ಸಂದರ್ಭದಲ್ಲಿ ಸ್ಥಳೀಯ ವನ್ಯಜೀವಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ, ಕುಳಗಿ ವಲಯ ಅರಣ್ಯಾಧಿಕಾರಿ ಸಾಗರ ಬಿ., ಹಾನಗಲ್ ವಲಯ ಅರಣ್ಯಾಧಿಕಾರಿ ಗಣೇಶಪ್ಪ ಎಂ. ಶೆಟ್ಟರ್, ಕೆ. ಮಲ್ಲಪ್ಪ, WRC-S ಪ್ರಾಜೆಕ್ಟ್ ಮ್ಯಾನೇಜರ್ ಅಮಿತ್ ಕುಮಾರ, ಪ್ರಾಜೆಕ್ಟ್ ಅಸೋಸಿಯೇಟ್ ಅಜಿಂಕ್ಯ ಬಾಗಲ್, ಪ್ರಾಜೆಕ್ಟ್ ಆಫೀಸರ್ ಪ್ರಜ್ವಲ ಕುಮಾರ, ದರ್ಶನ ನೆಲಂಗಿ, ಪ್ರಾಜೆಕ್ಟ್ ಅಸಿಸ್ಟಂಟ್ ವಿನೋದ ಕದಂ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಮಾನವ–ಆನೆ ಸಂಘರ್ಷವನ್ನು ತಡೆಯಲು ಅನುಸರಿಸಬಹುದಾದ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು. ವಿಶೇಷವಾಗಿ, ಟ್ರಿಪ್ ಅಲಾರಾಂ ವ್ಯವಸ್ಥೆ, ಫ್ಲಿಕರ್ ಲೈಟ್‌ಗಳು, ಸ್ಪೀಕರ್ ಮೂಲಕ ಧ್ವನಿ ನಿರೋಧಕ ಕ್ರಮಗಳು, ಮೆಣಸಿನ ಕಾಯಿ ಹೊಗೆ ವಿಧಾನ, ವಾಸನೆಯ ಆಧಾರಿತ ದ್ರಾವಣಗಳು, ಜೇನು ಬೇಲಿ (Bee Fence) ಹಾಗೂ ಜೈವಿಕ ಬೇಲಿ ವ್ಯವಸ್ಥೆಗಳ ಬಗ್ಗೆ ವಿವರವಾಗಿ ತಿಳಿಸಲಾಯಿತು.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಕಾಂಗ್ರೆಸ್ ಉಚ್ಚಾಟಿತ ಶಾಸಕ ಪೊಲೀಸ್ ವಶಕ್ಕೆ
ಈ ವಿಧಾನಗಳು ಆನೆಗಳ ಸಂಚಾರವನ್ನು ಮಾನವ ವಾಸಸ್ಥಳಗಳು ಹಾಗೂ ಕೃಷಿ ಜಮೀನುಗಳತ್ತ ಬರದಂತೆ ತಡೆಯಲು ಪರಿಣಾಮಕಾರಿಯಾಗಿದ್ದು, ರೈತರಿಗೆ ಬೆಳೆ ಹಾನಿ ತಪ್ಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು.
ಕಾರ್ಯಾಗಾರವು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಸಮುದಾಯಕ್ಕೆ ಮಾನವ–ಆನೆ ಸಂಘರ್ಷ ತಡೆಯಲು ಅಗತ್ಯವಾದ ಹೊಸ ಉಪಕರಣಗಳು, ತಾಂತ್ರಿಕ ಜ್ಞಾನ ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮಗಳು ಸಂಘರ್ಷವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು.























