ಬಾಗಲಕೋಟೆ: ಗುಳೇದಗುಡ್ಡ ಸಮೀಪದ ಮುರುಡಿ ಗ್ರಾಮದ ಹತ್ತಿರದ ಇಟ್ಟಿಗೆ ಭಟ್ಟಿಯಲ್ಲಿ ಒತ್ತೆಯಾಳಾಗಿ ದುಡಿಯುತ್ತಿದ್ದ ಹೊರರಾಜ್ಯದ 10 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಗುರುವಾರ ರಾತ್ರಿ ತಹಶೀಲ್ದಾರ್ ಎಸ್.ಎಫ್. ಬೊಮ್ಮಣ್ಣವರ ನಿರ್ದೇಶನದ ಮೇರೆಗೆ ಕಂದಾಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಒತ್ತೆಯಾಳಾಗಿ ಕೆಲಸ ಮಾಡುತ್ತಿದ್ದ ಒಡಿಶಾ ರಾಜ್ಯದ 10 ಕಾರ್ಮಿಕರನ್ನು ರಕ್ಷಣೆ ಮಾಡಿದರು. ಇಟ್ಟಿಗೆ ಭಟ್ಟಿ ಮಾಲೀಕ ಶರಣಪ್ಪ ಬಸಪ್ಪ ತೋಳಮಟ್ಟಿ ಅವರ ಮೇಲೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನದ ಪ್ರತಿಗಂಟೆಗೆ 24 ಲಕ್ಷ ಪೋಲು
ಬಳಿಕ ಕಾರ್ಮಿಕರನ್ನು ತಹಶೀಲ್ದಾರ್ ಕಚೇರಿಗೆ ಕರೆ ತಂದು ತಹಶೀಲ್ದಾರ್ ಎಸ್.ಎಫ್. ಬೊಮ್ಮಣ್ಣವರ, ಉಪತಹಶೀಲ್ದಾರ್ ಜಿ.ವಿ. ರಜಪೂತ ಅವರು ವಿಚಾರಣೆ ನಡೆಸಿದರು. ಬಳಿಕ ಎಲ್ಲ ಕಾರ್ಮಿಕರನ್ನು ಅವರ ಸ್ವಂತ ರಾಜ್ಯಕ್ಕೆ ಕಳುಹಿಸಲಾಯಿತು ಎಂದು ಕಂದಾಯ ನಿರೀಕ್ಷಕ ಶಿವರಾಯಪ್ಪ ಜೋಗಿನ ತಿಳಿಸಿದ್ದಾರೆ.
ಉಪತಹಶೀಲ್ದಾರ್ ಗಂಗಾರಾಮಸಿಂಗ್ ರಜಪೂತ, ಕಾರ್ಮಿಕ ಇಲಾಖೆಯ ಅಧಿಕಾರಿ ಸೊಂಬಡ, ಬಾಲ ಕಾರ್ಮಿಕ ಯೋಜನೆಯ ಸುಧಾಕರ ಬಡಿಗೇರ, ಬಾದಾಮಿ ಕಾರ್ಮಿಕ ನಿರೀಕ್ಷಕ ರಾಕೇಶ ಶಿರಕನಹಳ್ಳಿ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.























