ಪ್ರಮುಖ ಆರೋಪಿಗೆ 10 ವರ್ಷ ಜೈಲು, ಕುಟುಂಬಕ್ಕೆ ಪರಿಹಾರ
ವರದಿ -ಎನ್.ಜಯಚಂದ್ರನ್
ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ನಗರವನ್ನೇ ಬೆಚ್ಚಿಬೀಳಿಸಿದ್ದ ಹಾಗೂ 2012ರಲ್ಲಿ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಕರ್ತವ್ಯ ನಿರತ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಮದನ ನಾಯಕ ಹತ್ಯೆ ಪ್ರಕರಣದಲ್ಲಿ 13 ವರ್ಷಗಳ ನಂತರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಯಲ್ಲಾಪುರ ಪೀಠದ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಶುಕ್ರವಾರ ತೀರ್ಪು ಪ್ರಕಟಿಸಿದ್ದು, ಪ್ರಮುಖ ಆರೋಪಿತ ಪ್ರಶಾಂತ ರಾಮಾ ಲಮಾಣಿ ಅಪರಾಧಿ ಎಂದು ಸಾಬೀತಾಗಿದೆ.
ಇದನ್ನೂ ಓದಿ: ದಾಂಡೇಲಿ ಅಜಿತ್ ನಾಯ್ಕ ಕೊಲೆ ಪ್ರಕರಣ: ಪ್ರಮುಖ ಆರೋಪಿ ದೋಷಿ, ಜನವರಿ 13ಕ್ಕೆ ಶಿಕ್ಷೆ ಪ್ರಕಟ
ಪ್ರಮುಖ ಆರೋಪಿಗೆ 10 ವರ್ಷ ಕಾರಾಗೃಹ ಶಿಕ್ಷೆ: ನ್ಯಾಯಾಲಯವು ಪ್ರಶಾಂತ ರಾಮಾ ಲಮಾಣಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹11,000 ದಂಡ ವಿಧಿಸಿದೆ. ಜೊತೆಗೆ ಮೃತ ಮದನ ನಾಯಕ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ತಲಾ ₹50,000 ಪರಿಹಾರ ನೀಡುವಂತೆ ಆದೇಶಿಸಿದೆ. ಇನ್ನೂಳಿದ ಆರೋಪಿತರಾದ ಆನಂದ ರೂಪಸಿಂಗ್ ನಾಯಕ್. ಸುರೇಶ ಶಂಕ್ರಪ್ಪ ನಾಯಕ್. ಶೈಲಜಾ. ದಾನಾಬಾಯಿ. ಮಾಧುರಿ ರಾಠೋಡ ಇವರಿಗೆ ತಲಾ ₹1,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲರಾದಲ್ಲಿ ಒಂದು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
13 ವರ್ಷಗಳ ಕಾನೂನು ಹೋರಾಟ: ಈ ಪ್ರಕರಣವು ರಾಜ್ಯ ಸರ್ಕಾರದ ಗಮನ ಸೆಳೆದು, ಸಿಐಡಿ ತನಿಖೆಗೆ ವರ್ಗಾವಣೆಗೊಂಡಿತ್ತು. ಸಿಐಡಿ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಳಗೀಕರ ಅವರು ಸಮರ್ಥವಾದ ಸಾಕ್ಷ್ಯಾಧಾರಗಳೊಂದಿಗೆ ವಾದ ಮಂಡಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ಧೂಳೆಬ್ಬಿಸಿದ ಟಾಕ್ಸಿಕ್: ಟೀಸರ್‌ನಲ್ಲಿ ಈ ಸೀನ್ ಬೇಕಿತ್ತಾ?
ಘಟನೆ ಹಿನ್ನಲೆ: ದಾಂಡೇಲಿಯ ಕೇರವಾಡ ಗ್ರಾಮದ ಹಾಳಮಡ್ಡಿ ಮಜರೆಯ ಸಮೀಪ, ಕಾಳಿ ನದಿಯ ದಂಡೆಯಲ್ಲಿ ಶಿವರಾಮ ಅಪ್ಪಾಜಿ ಪಾಟೀಲ ಅವರ ಜಮೀನು ಇದ್ದು, ಅದಕ್ಕೆ ಹೊಂದಿಕೊಂಡಂತೆ ಪುರಮಾರ ಶ್ರೀ ದಾಂಡೇಲಪ್ಪ ದೇವಸ್ಥಾನ ಇದೆ. ಈ ಜಾಗದಲ್ಲಿ ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಿಸಿ, ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಮೊಸಳೆ ವೀಕ್ಷಣೆಗಾಗಿ ಮಾಂಸ ಅಡುಗೆ ಮಾಡಿ, ಉಳಿದ ಮಾಂಸದ ತುಂಡುಗಳನ್ನು ನದಿಯಲ್ಲಿದ್ದ ಮೊಸಳೆಗಳಿಗೆ ಹಾಕಲು ಅವಕಾಶ ನೀಡಲಾಗುತ್ತಿತ್ತು. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಆಗಿತ್ತು.
ಕರ್ತವ್ಯದಲ್ಲಿದ್ದ ಅಧಿಕಾರಿಗೆ ಮಾರಣಾಂತಿಕ ಹಲ್ಲೆ: ಮೇ 6, 2012 ರಂದು ಸಂಜೆ 4.30ರ ಸುಮಾರಿಗೆ, ಆರೋಪಿತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶೆಡ್‌ನಲ್ಲಿ ಮಾಂಸದ ಅಡುಗೆ ಮಾಡಿ, ಉಳಿದ ಮಾಂಸದ ತುಂಡುಗಳನ್ನು ಮೊಸಳೆಗಳಿಗೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಎಸಿಎಫ್ ಮದನ ನಾಯಕ ಅವರು ಕುಟುಂಬ ಸಮೇತರಾಗಿ ದಾಂಡೇಲಪ್ಪ ದೇವಸ್ಥಾನಕ್ಕೆ ಬಂದಿದ್ದರು. ಮೊಸಳೆಗಳಿಗೆ ಆಹಾರ ಹಾಕಬಾರದು, ಇದು ಅಪಾಯಕಾರಿ ಹಾಗೂ ಕಾನೂನುಬಾಹಿರ ಎಂದು ಅವರು ತಿಳಿಸಿದಾಗ ಆರೋಪಿತರು ಜಗಳಕ್ಕೆ ನಿಂತರು. ಮಾತಿನ ಜಗಳ ತೀವ್ರಗೊಂಡು, ಎಲ್ಲರೂ ಸೇರಿ ಸಂಘಟಿತವಾಗಿ ಮಾರಣಾಂತಿಕ ಹಲ್ಲೆ ನಡೆಸಿ, ಮದನ ನಾಯಕ ಅವರ ತಲೆಗೆ ಕಲ್ಲಿನಿಂದ ಹೊಡೆದರು.
ಇದನ್ನೂ ಓದಿ: WPL : ಇಂದು ಚಾಂಪಿಯನ್‌ಗಳ ಕದನ – MI vs RCB ವಿಡಿಯೋ ನೋಡಿ: MI vs RCB – WPL 2026 Blockbuster Match!
ಆಸ್ಪತ್ರೆಯಲ್ಲಿ ಸಾವಿಗೆ ಶರಣು: ಗಂಭೀರ ಗಾಯಗೊಂಡ ಮದನ ನಾಯಕರನ್ನು ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿ ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ, ತಲೆಗೆ ಆಗಿದ್ದ ತೀವ್ರ ಒಳಪೆಟ್ಟಿನ ಕಾರಣ ಮೇ 8, 2012 ರಾತ್ರಿ 10.30ಕ್ಕೆ ಅವರು ಮೃತಪಟ್ಟರು.
ಜನಾಕ್ರೋಶ ಮತ್ತು ಸಿಐಡಿ ತನಿಖೆ: ಘಟನೆಯ ನಂತರ ಸ್ಥಳೀಯ ಪೊಲೀಸ್‌ರಿಂದ ಸಮರ್ಪಕ ಕ್ರಮ ಕೈಗೊಳ್ಳದಿರುವುದು ಹಾಗೂ ಮೃತ ಅಧಿಕಾರಿಯ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದರಿಂದ ದಾಂಡೇಲಿಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ಮೇ 9ರಂದು ದಾಂಡೇಲಿಯ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಮದನ ನಾಯಕ ಅವರ ಶವವಿಟ್ಟು ಉಗ್ರ ಪ್ರತಿಭಟನೆ ನಡೆಸಲಾಯಿತು. ಜನರ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತು. ಸಿಐಡಿ ಡಿವೈಎಸ್‌ಪಿ ಬಿ.ಬಿ. ಅಶೋಕ್ ಕುಮಾರ್ ಅವರು ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿ: ಮಣ್ಣಿನ ಸೊಗಡನ್ನು ಪಸರಿಸುವ ರಾಗಾಯಣ ಅನಾವರಣ
ನ್ಯಾಯಕ್ಕೆ ದೀರ್ಘ ಹಾದಿ: ಕರ್ತವ್ಯ ನಿರತ ಅರಣ್ಯಾಧಿಕಾರಿಯ ಹತ್ಯೆ ಪ್ರಕರಣದಲ್ಲಿ 13 ವರ್ಷಗಳ ನಂತರ ಬಂದ ಈ ತೀರ್ಪು, ನ್ಯಾಯ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪುನಃ ದೃಢಪಡಿಸಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.









