ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ, ಹೊಸ ತಲೆಮಾರಿನ ಸಿನಿಮಾಗಳು ಒಂದರ ಹಿಂದೆ ಒಂದಾಗಿ ಬರುತ್ತಿರುವ ಈ ಕಾಲಘಟ್ಟದಲ್ಲಿ, ಆ ಬೆಳವಣಿಗೆಗೆ ಅಡಿಪಾಯ ಹಾಕಿದ, ಒಂದು ಯುಗವನ್ನೇ ರೂಪಿಸಿದ ದಿಗ್ಗಜರು ಮತ್ತೆ ಒಂದಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಕನ್ನಡ ಸಿನಿಮಾಗಳ ಘಮ ಹೆಚ್ಚುತ್ತಿರುವ ಸಂದರ್ಭದಲ್ಲಿ, ಹೊಸ ತಲೆಮಾರಿಗೆ ನವ್ಯ ದೃಷ್ಟಿಕೋನದ ಸಿನಿಮಾ ನೀಡಲು ಸಜ್ಜಾಗಿರುವವರು ನಿರ್ದೇಶಕ ಎಸ್. ಮಹೇಂದರ್ ಮತ್ತು ನಾದಬ್ರಹ್ಮ ಹಂಸಲೇಖ.
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಲೆಯ ಸಿನಿಮಾಗಳಿಗೆ ಗಟ್ಟಿಯಾದ ಗುರುತು ಮೂಡಿಸಿದ ಈ ಜೋಡಿ, ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿ ಸತತ ಹಿಟ್‌ಗಳನ್ನು ದಾಖಲಿಸಿದ ಅಪರೂಪದ ಕಾಂಬಿನೇಷನ್. ಅದೇ ಸಿನಿಮಾ ಶಿಸ್ತು, ಅದೇ ಉತ್ಸಾಹ ಮತ್ತು ಅದೇ ಕ್ರಿಯೇಟಿವ್ ಹುಮ್ಮಸ್ಸಿನೊಂದಿಗೆ, ಮೂರು ದಶಕಗಳ ಬಳಿಕ ಮತ್ತೆ ಒಂದಾಗಿ ಹೊಸ ದೃಶ್ಯಕಾವ್ಯಕ್ಕೆ ಕೈ ಹಾಕಿದ್ದಾರೆ.
ಇದನ್ನೂ ಓದಿ: WPL : ಇಂದು ಚಾಂಪಿಯನ್‌ಗಳ ಕದನ – MI vs RCB ವಿಡಿಯೋ ನೋಡಿ: MI vs RCB – WPL 2026 Blockbuster Match!
ಅನುಭವ ಮತ್ತು ನವ್ಯತೆಯ ಸಂಗಮ: ಎಸ್. ಮಹೇಂದರ್ ಅವರ ನಿರ್ದೇಶನ ಶೈಲಿ ಮತ್ತು ಹಂಸಲೇಖ ಅವರ ಸಂಗೀತ ಸಂಯೋಜನೆ, ಒಮ್ಮೆ ಕನ್ನಡ ಸಿನಿರಸಿಕರ ಮನಸ್ಸನ್ನು ಆಳಿದ್ದ ಮಾಯಾಜಾಲ. ಕಥೆ, ಸಂಗೀತ ಮತ್ತು ಭಾವನಾತ್ಮಕ ಆಳತೆ ಎಂಬ ಮೂರು ಅಂಶಗಳನ್ನು ಸಮತೋಲನವಾಗಿ ಬೆರೆಸುವಲ್ಲಿ ಈ ಜೋಡಿ ಸದಾ ಮುಂಚೂಣಿಯಲ್ಲಿತ್ತು. ಈಗಿನ ಯುವ ತಲೆಮಾರಿಗೆ ಕೂಡ ತಟ್ಟುವಂತಹ ಹೊಸ ಕಥಾನಕದೊಂದಿಗೆ, ಈ ಜೋಡಿ ಮತ್ತೆ ಪ್ರೇಕ್ಷಕರ ಮುಂದೆ ಬರುವುದಕ್ಕೆ ಸಜ್ಜಾಗಿದೆ.
ನಿರ್ಮಾಣಕ್ಕೆ ಕೆ.ಸಿ. ವಿಜಯ್ ಕುಮಾರ್ ಬೆಂಬಲ: ಈ ಬಹುನಿರೀಕ್ಷಿತ ಸಿನಿಮಾಗೆ, ಸುಮಾರು ಮೂರು ದಶಕಗಳಿಂದ ಚಿತ್ರರಂಗದ ಒಡನಾಡಿಯಾಗಿ, ಹಲವು ಚಿತ್ರಗಳಿಗೆ ಆರ್ಥಿಕ ಬೆಂಬಲ ನೀಡಿ ಬೆನ್ನೆಲುಬಾಗಿ ನಿಂತಿರುವ ಕೆ.ಸಿ. ವಿಜಯ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಶ್ರೀಗುರುರಾಯರು ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ, ಗುಣಮಟ್ಟದ ಸಿನಿಮಾ ನೀಡುವ ಉದ್ದೇಶವನ್ನು ಹೊಂದಿದೆ.
ಇದನ್ನೂ ಓದಿ: ಧೂಳೆಬ್ಬಿಸಿದ ಟಾಕ್ಸಿಕ್: ಟೀಸರ್‌ನಲ್ಲಿ ಈ ಸೀನ್ ಬೇಕಿತ್ತಾ?
ಶೀರ್ಷಿಕೆ ಅನಾವರಣಕ್ಕೆ ದಿನಾಂಕ: ಚಿತ್ರವು ಶೀಘ್ರದಲ್ಲೇ ಸೆಟ್ಟೇರಲಿದ್ದು, ಈ ತಿಂಗಳ 16ರಂದು ಚಿತ್ರದ ಶೀರ್ಷಿಕೆ ಹಾಗೂ ಸಂಪೂರ್ಣ ಚಿತ್ರತಂಡದ ಅಧಿಕೃತ ಪರಿಚಯವನ್ನು ಚಿತ್ರತಂಡ ಮಾಡಿಕೊಡಲಿದೆ. ಈ ಘೋಷಣೆಯೊಂದಿಗೆ, ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ಸಿನಿ ಪ್ರಯಾಣ ಆರಂಭವಾಗಲಿದೆ ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿ ಮೂಡಿದೆ.
ಹಳೆಯ ಯುಗದ ಅನುಭವ ಮತ್ತು ಹೊಸ ತಲೆಮಾರಿನ ಚಿಂತನೆ ಒಂದಾಗುವ ಈ ಸಿನಿಮಾ, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸ ಮೂಡಿಸಿದೆ.









