ಬೆಳಗಾವಿ ಪಾಲಿಕೆಯ ಎರಡು `ಮುಕ್ತಿ ವಾಹನ ಶೀಘ್ರವೇ ಲೋಕಾರ್ಪಣೆ’

0
7

ಬೆಳಗಾವಿ: ಮಾನವೀಯತೆಯ ಆಡಳಿತಕ್ಕೆ ಮತ್ತೊಂದು ಸ್ಪಷ್ಟ ಸಾಕ್ಷಿಯಾಗಿ ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ಜನಸೇವಾ ಹೆಜ್ಜೆ ಇಟ್ಟಿದ್ದು, ‘ಮುಕ್ತಿ ವಾಹನ’ ಸೇವೆ ಶೀಘ್ರದಲ್ಲೇ ನಗರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಮರಣದ ಕ್ಷಣದಲ್ಲಿ ಯಾವುದೇ ಕುಟುಂಬ ಅಸಹಾಯ ಸ್ಥಿತಿಗೆ ತಲುಪಬಾರದು ಎಂಬ ಉದ್ದೇಶದೊಂದಿಗೆ ಪಾಲಿಕೆಯು ಈ ಸೇವೆಯನ್ನು ಆರಂಭಿಸಿದೆ.

ಮಹಾನಗರ ಪಾಲಿಕೆಯ ವತಿಯಿಂದ ಒಟ್ಟು 36 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾದ ಎರಡು ಅತ್ಯಾಧುನಿಕ ಮುಕ್ತಿ ವಾಹನಗಳನ್ನು ಮೇಯರ್ ಮಂಗೇಶ ಪವಾರ್ ಹಾಗೂ ಉಪಮೇಯರ್ ವಾಣಿ ಜೋಶಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ವಾಹನಗಳ ವಿನ್ಯಾಸ, ಒಳಾಂಗಣ ವ್ಯವಸ್ಥೆ, ಶವ ಸಾಗಣೆ ವ್ಯವಸ್ಥೆ, ಸ್ವಚ್ಛತೆ ಹಾಗೂ ಭದ್ರತಾ ಅಂಶಗಳನ್ನು ಸಮಗ್ರವಾಗಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ನಾಯಂಡಹಳ್ಳಿಯಲ್ಲಿ ನಿಲುಗಡೆ

ಇಲ್ಲಿವರೆಗೆ ನಗರದಲ್ಲಿನ ಸಾರ್ವಜನಿಕರು ಮರಣ ಸಂಭವಿಸಿದ ಸಂದರ್ಭದಲ್ಲಿ ದುಬಾರಿ ಖಾಸಗಿ ಅಂಬುಲೆನ್ಸ್‌ಗಳು ಅಥವಾ ಅಸಮರ್ಪಕ ವ್ಯವಸ್ಥೆಗಳ ಮೇಲೆ ಅವಲಂಬಿತ ಆಗಬೇಕಾಗಿತ್ತು. ಇದೀಗ ಮಹಾನಗರ ಪಾಲಿಕೆಯ ಮೂಲಕ ಸರ್ಕಾರಿ ಮಟ್ಟದಲ್ಲೇ ಈ ಅಗತ್ಯ ಸೇವೆ ದೊರೆಯುತ್ತಿರುವುದು, ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ನಿರಾಳತೆ ತಂದಿದೆ.

ವಾಹನಗಳ ಪರಿಶೀಲನೆಯ ವೇಳೆ ಮಾತನಾಡಿದ ಮೇಯರ್ ಮಂಗೇಶ ಪವಾರ್ ಹಾಗೂ ಉಪಮೇಯರ್ ವಾಣಿ ಜೋಶಿ, “ಈ ಸೇವೆ ನಿರಂತರವಾಗಿ, ಪಾರದರ್ಶಕವಾಗಿ ಹಾಗೂ ಸಂಪೂರ್ಣ ಜನಪರವಾಗಿ ಕಾರ್ಯನಿರ್ವಹಿಸಬೇಕು. ನಗರದ ಯಾವುದೇ ಕುಟುಂಬ ಮರಣದ ಸಂದರ್ಭದಲ್ಲಿ ಅಸಹಾಯವಾಗಿ ಉಳಿಯಬಾರದು. ‘ಮುಕ್ತಿ ವಾಹನ’ಗಳು ಆ ಭರವಸೆಯ ಪ್ರತೀಕವಾಗಬೇಕು” ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಇದನ್ನೂ ಓದಿ: ಯಶ್ Toxicಗೆ ಹೊಸ ‘ವಸಂತ’: ರುಕ್ಕು ನಯಾ ಲುಕ್ಕು

ಇದಲ್ಲದೆ, “ಬೆಳಗಾವಿಯನ್ನು ಕೇವಲ ಮೂಲಸೌಕರ್ಯಗಳ ನಗರವಲ್ಲ, ಮಾನವೀಯ ಸಂವೇದನೆಯ ನಗರ ಎಂಬ ಗುರುತಿನತ್ತ ಕೊಂಡೊಯ್ಯುವ ದಿಕ್ಕಿನಲ್ಲಿ ಈ ಸೇವೆ ಮಹತ್ವದ ಪಾತ್ರ ವಹಿಸಲಿದೆ. ಮರಣದ ಕ್ಷಣದಲ್ಲಿ ಬಡವ–ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಒಂದೇ ರೀತಿಯ ಗೌರವ ಸಿಗಬೇಕು. ಮಹಾನಗರ ಪಾಲಿಕೆಯ ಈ ‘ಮುಕ್ತಿ ವಾಹನ’ ಸೇವೆ ಮಾನವೀಯ ಆಡಳಿತದ ಶಾಶ್ವತ ಗುರುತು” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜನತೆಗೆ ಅಗತ್ಯವಿರುವ ಅತ್ಯಂತ ಸೂಕ್ಷ್ಮ ಮತ್ತು ಮಹತ್ವದ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ ಆರಂಭವಾಗುತ್ತಿರುವ ಈ ಸೇವೆ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಸ್ವಾಗತ ಪಡೆಯುತ್ತಿದೆ.

Previous articleಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ನಾಯಂಡಹಳ್ಳಿಯಲ್ಲಿ ನಿಲುಗಡೆ