ಮೈಸೂರು: ಮೈಸೂರು ಹಾಗೂ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಗೆ ಸಂಚರಿಸುವ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ಬೆಂಗಳೂರು ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ನಿಲುಗಡೆ ಒದಗಿಸುವ ಬಹುದಿನದ ಪ್ರಯಾಣಿಕರ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಮೈಸೂರು–ಕೆಎಸ್‌ಆರ್ ಸಿಟಿ ಚಾಮುಂಡಿ ಎಕ್ಸ್‌ಪ್ರೆಸ್ (16215/16216), ಮೈಸೂರು–ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ (17307/17308), ಟುಟಿಕೋರಿನ್–ಮೈಸೂರು ಎಕ್ಸ್‌ಪ್ರೆಸ್ (16235/16236) ಹಾಗೂ ಮೈಸೂರು–ಪಂಡರಾಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ (16535/16536) ರೈಲುಗಳಿಗೆ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯಶ್ Toxicಗೆ ಹೊಸ ‘ವಸಂತ’: ರುಕ್ಕು ನಯಾ ಲುಕ್ಕು
ಬೆಂಗಳೂರಿನ ಪಶ್ಚಿಮ ಭಾಗದಲ್ಲಿ ವಾಸಿಸುವ ಸಾವಿರಾರು ಪ್ರಯಾಣಿಕರು, ವಿಶೇಷವಾಗಿ ಮೈಸೂರು, ಬಾಗಲಕೋಟೆ, ವಿಜಯಪುರ, ಪಂಡರಾಪುರ ಹಾಗೂ ತಮಿಳುನಾಡಿನ ಟುಟಿಕೋರಿನ್ ಭಾಗಗಳಿಗೆ ತೆರಳುವವರು, ನಾಯಂಡಹಳ್ಳಿ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದರು. ಈ ನಿಲುಗಡೆ ಇಲ್ಲದ ಕಾರಣ ಅವರು ಕೆಎಸ್‌ಆರ್ ಬೆಂಗಳೂರು ನಗರ ನಿಲ್ದಾಣ ಅಥವಾ ಯಶವಂತಪುರಕ್ಕೆ ತೆರಳಬೇಕಾಗುತ್ತಿದ್ದು, ಸಮಯ ಮತ್ತು ಸಂಚಾರದ ಸಮಸ್ಯೆ ಎದುರಿಸುತ್ತಿದ್ದರು.
ಈ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸಮಯ ಉಳಿತಾಯ, ಸಂಚಾರದ ಸುಲಭತೆ ಹಾಗೂ ಅನುಕೂಲಕರ ಸಂಪರ್ಕ ದೊರೆಯಲಿದೆ. ವಿಶೇಷವಾಗಿ ಉದ್ಯೋಗಸ್ಥರು, ವಿದ್ಯಾರ್ಥಿಗಳು ಮತ್ತು ವಯೋವೃದ್ಧ ಪ್ರಯಾಣಿಕರಿಗೆ ಇದು ಮಹತ್ತರ ನೆರವಾಗಲಿದೆ.
ಇದನ್ನೂ ಓದಿ: ಬಳ್ಳಾರಿ ಪ್ರಕರಣ: ಮೃತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ
ಕೇಂದ್ರ ಸಚಿವ ವಿ. ಸೋಮಣ್ಣ ಅವರು, “ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ನಿರ್ಧಾರದಿಂದ ಬೆಂಗಳೂರು ನಗರದಲ್ಲಿನ ರೈಲು ನಿಲ್ದಾಣಗಳ ಮೇಲಿನ ಒತ್ತಡವೂ ಕಡಿಮೆಯಾಗುವ ನಿರೀಕ್ಷೆಯಿದ್ದು, ನಾಯಂಡಹಳ್ಳಿ ರೈಲು ನಿಲ್ದಾಣದ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಲಿದೆ.






















