ದಾಂಡೇಲಿ: ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಶನಿವಾರ ಅಮಾನವೀಯವಾಗಿ ಕೊಲೆಯಾದ ರಂಜಿತಾ ಬನಸೋಡೆ ಅವರ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ₹8.5 ಲಕ್ಷ ಪರಿಹಾರ ಧನವನ್ನು ವಿತರಿಸಲಾಗಿದೆ. ದಾಂಡೇಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಮೃತ ಮಹಿಳೆಯ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಮಂಜೂರಾದ ಪರಿಹಾರ ಮೊತ್ತದ ಚೆಕ್ ಹಾಗೂ ಆದೇಶ ಪತ್ರವನ್ನು ಹಸ್ತಾಂತರಿಸಿದರು.
ರವಿವಾರ ರಂಜಿತಾ ಬನಸೋಡೆ ಅವರು ವಾಸವಿದ್ದ ಸಂಬಂಧಿಕರ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಹೆಬ್ಬಾರ್, ಈ ಘಟನೆ ಕುರಿತು ತೀವ್ರ ದುಃಖ ವ್ಯಕ್ತಪಡಿಸಿ, “ರಂಜಿತಾ ಬನಸೋಡೆ ಅವರ ಅಮಾನವೀಯ ಹತ್ಯೆ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತಹ ದುರ್ಘಟನೆಯಾಗಿದೆ. ಇಂತಹ ಕೃತ್ಯಗಳು ಮನುಷ್ಯತ್ವಕ್ಕೆ ಮಸಿ ಬಳಿಯುವಂತಿವೆ” ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಯಲ್ಲಾಪುರ: ಮಹಿಳೆಯ ಕೊಲೆ ಮಾಡಿ ಪರಾರಿಯಾಗಿದ್ದ ರಫಿಕ್ ಆತ್ಮಹತ್ಯೆ
ಶಾಸಕರು ಕುಟುಂಬಸ್ಥರಿಗೆ ₹8.25 ಲಕ್ಷ ಪರಿಹಾರ ಧನದ ಆದೇಶ ಪತ್ರವನ್ನು ವಿತರಿಸಿ, ಬಳಿಕ ರಂಜಿತಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ದುಃಖತಪ್ತ ಕುಟುಂಬದವರೊಂದಿಗೆ ಮಾತನಾಡಿ, ಈ ಸಂಕಷ್ಟದ ಸಮಯದಲ್ಲಿ ಸರ್ಕಾರ ಹಾಗೂ ತಾವು ಸದಾ ಕುಟುಂಬದ ಜೊತೆಗೆ ಇರುವುದಾಗಿ ಭರವಸೆ ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ, ತಹಶಿಲ್ದಾರ ಚಂದ್ರಶೇಖರ ಹೊಸ್ಮನಿ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿ.ಎಸ್. ಭಟ್ ಸೇರಿದಂತೆ ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೆ, ಸ್ಥಳೀಯ ಸಾರ್ವಜನಿಕರೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ ಯುವತಿಯ ಮರ್ಯಾದಾಗೇಡು ಹತ್ಯೆ: ವಿಶೇಷ ನ್ಯಾಯಾಲಯ
ಯಲ್ಲಾಪುರದಲ್ಲಿ ನಡೆದ ಈ ಹತ್ಯೆ ಪ್ರಕರಣವು ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಸುವ್ಯವಸ್ಥೆ ಬಲಪಡಿಸಬೇಕು ಎಂಬ ಆಗ್ರಹಗಳು ಜನರಿಂದ ಕೇಳಿಬರುತ್ತಿವೆ.























