ಬಳ್ಳಾರಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಬಳ್ಳಾರಿ ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು (ಎಸ್‌ಪಿ) ಅಮಾನತು ಮಾಡಿರುವುದು ತಪ್ಪು ನಿರ್ಧಾರ. ಬದಲಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಅಮಾನತು ಮಾಡಬೇಕಿತ್ತು ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಗೂಂಡಾಗಳಿಂದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಇಂದು ಬಳ್ಳಾರಿಗೆ ಭೇಟಿ ನೀಡಿದ ಆರ್.ಅಶೋಕ್, ಬಿಜೆಪಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಧೈರ್ಯ ತುಂಬಿದರು. ಜೊತೆಗೆ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ಬಳ್ಳಾರಿ ಫೈರಿಂಗ್ ಪ್ರಕರಣ: ರಾಜಶೇಖರ್ಗೆ ತಗುಲಿದ್ದ ಖಾಸಗಿ ಬುಲೆಟ್?
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಗನ್‌ಮ್ಯಾನ್ ಗುಂಡು ಹಾರಿಸಿದ್ದಾನೆ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದ ಕಾರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಆರೋಪಿಸಿದರು. “ಗನ್ ಅನ್ನು ವಶಕ್ಕೆ ಪಡೆದು ಆರೋಪಿಗಳು ರಾಜ್ಯ ಬಿಟ್ಟು ಓಡಿಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಸರ್ಕಾರವೇ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂಬುದಕ್ಕೆ ಬಳ್ಳಾರಿ ಘಟನೆ ಸಾಕ್ಷಿ” ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಇದು ಕೊಲೆಗಡುಕ ಸರ್ಕಾರ ಎಂದು ಆರ್.ಅಶೋಕ್ ಕಿಡಿಕಾರಿದರು. ಕಾಂಗ್ರೆಸ್ ಆಡಳಿತದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಅಪಾರ ಮಾನಸಿಕ ಒತ್ತಡವಿದ್ದು, ಹಣ ಕೊಟ್ಟರೆ ಮಾತ್ರ ಪೋಸ್ಟಿಂಗ್ ಸಿಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ: 45 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ದುರ್ಘಟನೆ ನೋಡಿಲ್ಲ
“ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿಯವರ ಮೇಲೆ ಗುಂಡಿನ ದಾಳಿ ಯತ್ನ ನಡೆದಿದೆ. ಆದರೆ ಇದರ ಹೊಣೆಯನ್ನು ಹೊರುವ ಬದಲು ಎಸ್‌ಪಿಯನ್ನು ಬಲಿಪಶುವನ್ನಾಗಿ ಮಾಡಿದ್ದಾರೆ. ಶಾಸಕ ಭರತ್ ರೆಡ್ಡಿಯವರ ಗನ್‌ಮ್ಯಾನ್ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಕ್ಕೆ ಎಸ್‌ಪಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದೀಗ ಆ ಎಸ್‌ಪಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ” ಎಂದು ಹೇಳಿದರು.
ಅಪರಾಧಿಗಳು ಪರಾರಿಯಾದ ನಂತರ ಎಫ್‌ಐಆರ್ ದಾಖಲಿಸುವ ನಾಟಕ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಸರ್ಕಾರದ ಒತ್ತಡದಿಂದಲೇ ಅಧಿಕಾರಿಗಳು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಈಗಾಗಲೇ 12 ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಗಂಟೆಯೊಳಗೆ ಎಸ್‌ಪಿಯನ್ನು ಅಮಾನತು ಮಾಡಲಾಗಿದೆ. ಆದರೆ 2.5 ವರ್ಷಗಳಿಂದ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಯಾವುದೇ ಕ್ರಮವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು, ಇದು ‘ನೇಣು ಭಾಗ್ಯದ ಸರ್ಕಾರ’ ಎಂದು ಹೇಳಿದ ಆರ್.ಅಶೋಕ್, ಬಳ್ಳಾರಿ ಘಟನೆ ಸರ್ಕಾರದ ಅರಾಜಕತೆ ಮತ್ತು ರಾಜಕೀಯ ಹಸ್ತಕ್ಷೇಪದ ಜೀವಂತ ಉದಾಹರಣೆ ಎಂದು ಅಭಿಪ್ರಾಯಪಟ್ಟರು.






















