ರಸ್ತೆ ಅಪಘಾತ ಸುದ್ದಿ ಬಗ್ಗೆ ನಟ ಆಶಿಷ್ ವಿದ್ಯಾರ್ಥಿ ಸ್ಪಷ್ಟನೆ

0
3

ಗುಹವಾಟಿ: ಬಹುಭಾಷಾ ನಟ ಆಶಿಷ್ ವಿದ್ಯಾರ್ಥಿ ಹಾಗೂ ಅವರ ಪತ್ನಿ ರೂಪಾಲಿ ರಸ್ತೆ ಅಪಘಾತದಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ ಬೆನ್ನಲ್ಲೇ, ನಟ ಆಶಿಷ್ ವಿದ್ಯಾರ್ಥಿಯವರೇ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ. ಗುಹವಾಟಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮೂಲಕ ಪ್ರತಿಕ್ರಿಯೆ ನೀಡಿ, ಆತಂಕ ಪಡಬೇಕಾದ ಪರಿಸ್ಥಿತಿ ಏನೂ ಇಲ್ಲ ಎಂದು ಹೇಳಿದ್ದಾರೆ.

ಅಪಘಾತದ ವಿವರ ನೀಡಿದ ಆಶಿಷ್ ವಿದ್ಯಾರ್ಥಿ, ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಮಗೂ ಹಾಗೂ ಪತ್ನಿ ರೂಪಾಲಿಗೂ ಸಣ್ಣ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದರು.

ಇದನ್ನೂ ಓದಿ:  ‘ಆಕಾಶ’ದಲ್ಲಿ ಅಪ್ಪು ಮತ್ತೆ ಮಿನುಗು’ತಾರೆ’

ರೂಪಾಲಿ ಅವರ ಆರೋಗ್ಯ ಸ್ಥಿತಿಯ ಕುರಿತು ಮಾತನಾಡಿದ ಅವರು, ಅಪಘಾತದ ನಂತರ ಕೆಲ ಸಮಯ ರೂಪಾಲಿಗೆ ಪ್ರಜ್ಞೆ ತಪ್ಪಿದ್ದರೂ, ಇದೀಗ ಅವರು ಚೇತರಿಸಿಕೊಂಡಿದ್ದು ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

“ಅಪಘಾತ ನಡೆದಿದ್ದು ನಿಜ. ಆದರೆ ಅದನ್ನು ಭಯಾನಕವಾಗಿ ಚಿತ್ರಿಸುವ ಅಗತ್ಯ ಇಲ್ಲ. ನಾವು ಆಸ್ಪತ್ರೆಯಲ್ಲಿ ಚೆನ್ನಾಗಿದ್ದೇವೆ. ರೂಪಾಲಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ. ನನಗೂ ಯಾವುದೇ ಗಂಭೀರ ಗಾಯಗಳಿಲ್ಲ” ಎಂದು ಆಶಿಷ್ ವಿದ್ಯಾರ್ಥಿ ಸ್ಪಷ್ಟವಾಗಿ ಹೇಳಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನ ಸ್ಥಿತಿಯ ಕುರಿತೂ ಮಾತನಾಡಿದ ಅವರು, ಆತನಿಗೂ ಈಗ ಪ್ರಜ್ಞೆ ಬಂದಿದೆ ಎಂದು ತಿಳಿಸಿದರು. “ಆತನಿಗೂ ಈಗ ಆರೋಗ್ಯ ಸುಧಾರಿಸುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಅವರು ಮಾನವೀಯವಾಗಿ ಕೋರಿದರು.

ಇದನ್ನೂ ಓದಿ:  ಮೈಸೂರು ವಿವಿ : ರಾಜೇಂದ್ರಸಿಂಗ್ ಬಾಬು ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಲ್ಲಿ ಖ್ಯಾತ ಖಳನಟನಾಗಿ ಗುರುತಿಸಿಕೊಂಡಿರುವ ಆಶಿಷ್ ವಿದ್ಯಾರ್ಥಿ, ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಗಿಂತ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ತಮ್ಮ ಪ್ರವಾಸ ಅನುಭವಗಳು, ಆಹಾರ ಸಂಚರಣೆ ಹಾಗೂ ಜೀವನದ ಸಣ್ಣ ಸಣ್ಣ ಕ್ಷಣಗಳನ್ನು ಅವರು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದು, ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದ್ದಾರೆ.

ಅಪಘಾತದ ಸುದ್ದಿ ಅತಿರಂಜಿತವಾಗಿ ಹರಡಿದ ಹಿನ್ನೆಲೆಯಲ್ಲಿ, ಅಭಿಮಾನಿಗಳ ಆತಂಕವನ್ನು ನಿವಾರಿಸಲು ನಟನೇ ಮುಂದೆ ಬಂದು ಸ್ಪಷ್ಟನೆ ನೀಡಿರುವುದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

Previous articleಶನಿವಾರ ಆಕಾಶದಲ್ಲಿ ವಿಸ್ಮಯ: Wolf Supermoon ಕಂಗೊಳಿಸಿದ ಕ್ಷಣ