ಹುಬ್ಬಳ್ಳಿ: ಆಕಾಶ ವೀಕ್ಷಕರಿಗೆ ಹಾಗೂ ಖಗೋಳಾಸಕ್ತರಿಗೆ ಅಪರೂಪದ ದೃಶ್ಯವೊಂದು ಜನವರಿ 3ರ ರಾತ್ರಿ ಕಣ್ಮನ ಸೆಳೆಯಲಿದೆ. ಈ ದಿನ ಆಕಾಶದಲ್ಲಿ ವೂಲ್ಫ್ ಸೂಪರ್‌ಮೂನ್ (Wolf Supermoon) ಪ್ರಕಾಶಮಾನವಾಗಿ ಬೆಳಗಲಿದ್ದು, ಸಾಮಾನ್ಯ ಹುಣ್ಣಿಮೆಯಿಗಿಂತ ದೊಡ್ಡದಾಗಿ ಹಾಗೂ ಹೆಚ್ಚು ಹೊಳೆಯುವಂತೆ ಕಾಣಿಸಿಕೊಳ್ಳಲಿದೆ.
ಖಗೋಳಶಾಸ್ತ್ರದ ಪ್ರಕಾರ, ಜನವರಿ ತಿಂಗಳಲ್ಲಿ ಬರುವ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ ವೂಲ್ಫ್ ಮೂನ್ ಎಂದು ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಚಳಿಗಾಲದ ತೀವ್ರತೆಯ ಸಮಯದಲ್ಲಿ ತೋಳಗಳ ಕೂಗು ಹೆಚ್ಚು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಈ ಹುಣ್ಣಿಮೆಗೆ “ವೂಲ್ಫ್ ಮೂನ್” ಎಂಬ ಹೆಸರು ಬಂದಿದೆ.
ಏಕೆ ಇದು ಸೂಪರ್‌ಮೂನ್?: ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಹತ್ತಿರ ಬರುವ ಬಿಂದುವನ್ನು ಪೆರಿಜಿ (Perigee) ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಹುಣ್ಣಿಮೆ ಸಂಭವಿಸಿದರೆ ಅದನ್ನು ಸೂಪರ್‌ಮೂನ್ ಎಂದು ಗುರುತಿಸಲಾಗುತ್ತದೆ.
ಇದನ್ನೂ ಓದಿ: ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶ ಪ್ರಕರಣ: ಮತ್ತಿಬ್ಬರ ಬಂಧನ
ಜನವರಿ 3ರಂದು ಚಂದ್ರನು ಭೂಮಿಯಿಂದ ಸುಮಾರು 3,62,000 ಕಿಲೋಮೀಟರ್ ದೂರದಲ್ಲಿದ್ದು, ಇದು ಅದರ ಸಾಮಾನ್ಯ ದೂರಕ್ಕಿಂತ ಕಡಿಮೆ. ಚಂದ್ರನ ಕಕ್ಷೆ ದೀರ್ಘವೃತ್ತಾಕಾರದ (elliptical) ಆಗಿರುವುದರಿಂದ ಅದರ ದೂರವು ಸುಮಾರು 3,56,000 ಕಿ.ಮೀ.ದಿಂದ 4,06,000 ಕಿ.ಮೀ.ವರೆಗೆ ಬದಲಾಗುತ್ತದೆ.
ಈ ಕಾರಣದಿಂದಾಗಿ, ವೂಲ್ಫ್ ಸೂಪರ್‌ಮೂನ್ ಸಾಮಾನ್ಯ ಹುಣ್ಣಿಮೆಯಿಗಿಂತ ಸುಮಾರು ಶೇ.6 ರಿಂದ 14ರಷ್ಟು ದೊಡ್ಡದಾಗಿ ಹಾಗೂ ಶೇ.13 ರಿಂದ 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತದೆ.
2026ರ ಅತ್ಯಂತ ಪ್ರಕಾಶಮಾನ ಹುಣ್ಣಿಮೆಗಳಲ್ಲೊಂದು: ಈ ವೂಲ್ಫ್ ಸೂಪರ್‌ಮೂನ್ ವಿಶೇಷವಾಗಿರುವ ಮತ್ತೊಂದು ಕಾರಣವೆಂದರೆ, ಈ ಸಮಯದಲ್ಲಿ ಭೂಮಿಯು ಸೂರ್ಯನಿಗೆ ಹತ್ತಿರವಾಗಿರುತ್ತದೆ. ಇದರಿಂದ ಚಂದ್ರನ ಮೇಲ್ಮೈ ಮೇಲೆ ಬೀಳುವ ಸೂರ್ಯನ ಬೆಳಕು ಇನ್ನಷ್ಟು ತೀವ್ರವಾಗಿ ಪ್ರತಿಫಲಿಸಿ, ಚಂದ್ರನು ಹೆಚ್ಚು ಹೊಳೆಯುವಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ, ಇದು 2026ರ ಅತ್ಯಂತ ಪ್ರಕಾಶಮಾನವಾದ ಹುಣ್ಣಿಮೆಗಳಲ್ಲೊಂದು ಎಂದು ಖಗೋಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: 45 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ದುರ್ಘಟನೆ ನೋಡಿಲ್ಲ
ಕಣ್ಣಿಗೆ ಬೀಳುವ ವಿಶೇಷ ದೃಶ್ಯ: ಜನವರಿ 2 ಮತ್ತು 3ರಂದು ಚಂದ್ರೋದಯದ ಸಮಯದಲ್ಲಿ ವೂಲ್ಫ್ ಸೂಪರ್‌ಮೂನ್ ಅತ್ಯಂತ ಮನಮೋಹಕವಾಗಿ ಕಾಣಿಸಿಕೊಳ್ಳಲಿದೆ. ಭೂಮಿಯ ವಾತಾವರಣದ ಪರಿಣಾಮವಾಗಿ ಚಂದ್ರನು ಹಳದಿ ಅಥವಾ ಕಿತ್ತಳೆ ಬಣ್ಣದ ಛಾಯೆಯನ್ನು ಪಡೆದುಕೊಳ್ಳಬಹುದು. ಉತ್ತಮ ಆಕಾಶ ಪರಿಸ್ಥಿತಿಯಿದ್ದರೆ, ಚಂದ್ರನ ಸಮೀಪದಲ್ಲೇ ಹೊಳೆಯುವ ಗುರು ಗ್ರಹವನ್ನೂ (Jupiter) ವೀಕ್ಷಕರು ಸುಲಭವಾಗಿ ಗುರುತಿಸಬಹುದಾಗಿದೆ.
ಖಗೋಳಾಸಕ್ತರಿಗೆ ಇದು ಫೋಟೋಗ್ರಫಿಗೆ ಹಾಗೂ ನೇರ ವೀಕ್ಷಣೆಗೆ ಅಪರೂಪದ ಅವಕಾಶವಾಗಿದ್ದು, ಸ್ವಚ್ಛ ಆಕಾಶವಿರುವ ಪ್ರದೇಶಗಳಲ್ಲಿ ಈ ದೃಶ್ಯ ಇನ್ನಷ್ಟು ಅದ್ಭುತವಾಗಿ ಕಾಣಿಸಿಕೊಳ್ಳಲಿದೆ.





















