‘ಆಕಾಶ’ದಲ್ಲಿ ಅಪ್ಪು ಮತ್ತೆ ಮಿನುಗು’ತಾರೆ’

0
6

ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲೇ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಈ ಬಾರಿ ಅಪ್ಪು ಹುಟ್ಟುಹಬ್ಬದ ಸಂಭ್ರಮ ಇನ್ನಷ್ಟು ವಿಶೇಷವಾಗಲಿದ್ದು, ಪುನೀತ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಆಕಾಶ್’ ಮತ್ತೆ ಬೆಳ್ಳಿ ಪರದೆ ಮೇಲೆ ಮರಳಿ ಬರಲು ಸಜ್ಜಾಗಿದೆ.

ಅಪ್ಪು ಅಗಲಿ ವರ್ಷಗಳ ಕಳೆದರೂ ಅವರ ನೆನಪು ಅಭಿಮಾನಿಗಳ ಹೃದಯದಲ್ಲಿ ಹಸಿರಾಗಿಯೇ ಉಳಿದಿದೆ. ಪರಮಾತ್ಮನ ನೆನಪು ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪ್ರತಿವರ್ಷ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಅದರ ಭಾಗವಾಗಿಯೇ, ಪ್ರತಿ ವರ್ಷ ಮಾರ್ಚ್ 17ರಂದು ಅದ್ಧೂರಿಯಾಗಿ ಆಚರಿಸಲಾಗುವ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮಕ್ಕೆ ಅವರ ಹಿಟ್ ಸಿನಿಮಾಗಳ ಮರು ಬಿಡುಗಡೆ ಒಂದು ವಿಶೇಷ ಆಕರ್ಷಣೆಯಾಗಿದೆ.

ಇದನ್ನೂ ಓದಿ:  ಮೈಸೂರು ವಿವಿ : ರಾಜೇಂದ್ರಸಿಂಗ್ ಬಾಬು ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ಈಗಾಗಲೇ ‘ಜಾಕಿ’ ಮತ್ತು ‘ಅಪ್ಪು’ ಸಿನಿಮಾಗಳು ರೀ-ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದವು. ಇದೇ ಸಾಲಿನಲ್ಲಿ ಈ ವರ್ಷ ಮತ್ತೊಂದು ಸೂಪರ್ ಹಿಟ್ ಸಿನಿಮಾ ‘ಆಕಾಶ್’ ಮರುಬಿಡುಗಡೆಯಾಗುತ್ತಿದೆ. 2005ರಲ್ಲಿ ತೆರೆಕಂಡ ಈ ಚಿತ್ರ, ಬಿಡುಗಡೆಯಾದ ಸಮಯದಲ್ಲೇ ಭಾರೀ ಯಶಸ್ಸು ಕಂಡು 200 ದಿನಗಳ ಕಾಲ ಪ್ರದರ್ಶನ ಕಂಡ ದಾಖಲೆ ಬರೆದಿತ್ತು.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್, “ನೀನೆ ನೀನೆ ನನಗೆಲ್ಲಾ ನೀನೆ… ಮಾತು ನೀನೆ ಮನಸೆಲ್ಲಾ ನೀನೆ… ಎಷ್ಟೇ ವರ್ಷ ಕಳೆದರೂ ಮರೆಯಾಗದ ಕಥೆಗೆ ಸಾಕ್ಷಿಯಾಗಲು ಸಿದ್ಧರಾಗಿ. ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಸಂಭ್ರಮದಲ್ಲಿ ‘ಆಕಾಶ್’ ಸಿನಿಮಾ 4K ರೀ-ಮಾಸ್ಟರ್ಡ್ ವರ್ಷನ್‌ನಲ್ಲಿ ಮಾರ್ಚ್ 13ರಂದು ಚಿತ್ರಮಂದಿರಗಳಿಗೆ ಮರಳುತ್ತಿದೆ” ಎಂದು ಘೋಷಣೆ ಮಾಡಿದ್ದಾರೆ. ಜೊತೆಗೆ ಹೊಸ ಪೋಸ್ಟರ್‌ನ್ನೂ ಬಿಡುಗಡೆ ಮಾಡಿದ್ದಾರೆ.

ಶ್ರೀ ಚಕ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದ ಈ ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸಿದ್ದರು. ಇದು ಮಹೇಶ್ ಬಾಬು ಅವರ ಮೊದಲ ಸ್ವತಂತ್ರ ನಿರ್ದೇಶನದ ಸಿನಿಮಾ ಎಂಬುದು ವಿಶೇಷ. ಆರ್. ಪಿ. ಪಟ್ನಾಯಕ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಸೂಪರ್ ಹಿಟ್ ಆಗಿದ್ದು, ಚಿತ್ರಕ್ಕೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟವು.

ಇದನ್ನೂ ಓದಿ: Toxicಗೆ ಮತ್ತಷ್ಟು ‘ತಾರಾ’ ಮೆರಗು: ಯಶ್‌ ಜೊತೆ ಸುತಾರಿಯಾ ಸಾಥ್

ಪುನೀತ್ ರಾಜ್‌ಕುಮಾರ್ ಹಾಗೂ ರಮ್ಯಾ ಜೋಡಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದು, ಅವಿನಾಶ್, ಆಶೀಷ್ ವಿದ್ಯಾರ್ಥಿ, ಪವಿತ್ರಾ ಲೋಕೇಶ್, ಕಿಶೋರ್, ಟೆನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಪ್ರಮುಖ ತಾರಾಗಣ ಚಿತ್ರದಲ್ಲಿತ್ತು. ಜನಾರ್ಧನ್ ಮಹರ್ಷಿ ಕತೆ, ಎಂ. ಎಸ್. ರಮೇಶ್ ಸಂಭಾಷಣೆ, ಪ್ರಸಾದ್ ಬಾಬು ಛಾಯಾಗ್ರಹಣ ಚಿತ್ರಕ್ಕಿತ್ತು.

ಇದುವರೆಗೆ ‘ಜಾಕಿ’ ಮತ್ತು ‘ಅಪ್ಪು’ ಬಳಿಕ ‘ಪರಮಾತ್ಮ’ ಸಿನಿಮಾವನ್ನು ರೀ-ರಿಲೀಸ್ ಮಾಡಬೇಕು ಎಂಬ ಬೇಡಿಕೆ ಇದ್ದರೂ, ಈ ಬಾರಿ ‘ಆಕಾಶ್’ಗೆ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಯೋಗರಾಜ್ ಭಟ್ ನಿರ್ದೇಶನದ ‘ಪರಮಾತ್ಮ’ ಕೂಡ ಮರುಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಸಿನಿರಂಗದಲ್ಲಿ ಮಾತು ಕೇಳಿಬರುತ್ತಿದೆ.

Previous articleಬಳ್ಳಾರಿ ಫೈರಿಂಗ್ ಪ್ರಕರಣ: ರಾಜಶೇಖರ್​​ಗೆ ತಗುಲಿದ್ದ ಖಾಸಗಿ ಬುಲೆಟ್?