ಯಲ್ಲಾಪುರ: ಮಹಿಳೆಯ ಕೊಲೆ ಮಾಡಿ ಪರಾರಿಯಾಗಿದ್ದ ರಫಿಕ್ ಆತ್ಮಹತ್ಯೆ

0
4

ಯಲ್ಲಾಪುರ: ಪಟ್ಟಣದ ಕಾಳಮ್ಮನಗರದಲ್ಲಿ ಶನಿವಾರ ಹಾಡಹಗಲೇ ನಡೆದ ಮಹಿಳೆಯ ಭೀಕರ ಹತ್ಯೆ ಪ್ರಕರಣ ಭಾನುವಾರ ಹೊಸ ತಿರುವು ಪಡೆದುಕೊಂಡಿದೆ. ರಂಜಿತಾ ಬನ್ನೊಡೆ (30) ಎಂಬ ಮಹಿಳೆಯನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರೋಪಿ ರಫಿಕ್ ಯಳ್ಳೂರ ಭಾನುವಾರ ಸಮೀಪದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಶನಿವಾರ ಮಧ್ಯಾಹ್ನ ಕಾಳಮ್ಮನಗರದಲ್ಲಿ ರಫಿಕ್, ರಂಜಿತಾ ಬನ್ನೊಡೆ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ರಂಜಿತಾಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆಯೇ ರಂಜಿತಾ ಮೃತಪಟ್ಟಿದ್ದಾಳೆ.

ಇದನ್ನೂ ಓದಿ:  ಮದುವೆಗೆ ನಿರಾಕರಿಸಿದ ವಿಚ್ಛೇದಿತ ಮಹಿಳೆಯ ಭೀಕರ ಕೊಲೆ

ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಾರಿಯಾಗಿದ್ದ ರಫಿಕ್‌ಗಾಗಿ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದರು. ಶೋಧ ಕಾರ್ಯಕ್ಕೆ ಸಹಕಾರಕ್ಕಾಗಿ ಆರೋಪಿ ರಫಿಕ್‌ನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿತ್ತು. ಘಟನೆ ಕೋಮು ಸೂಕ್ಷ್ಮ ಸ್ವರೂಪ ಪಡೆದುಕೊಂಡಿದ್ದು, ಯಲ್ಲಾಪುರ ಪಟ್ಟಣದಲ್ಲಿ ಭಯ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರು ಘಟನೆಯನ್ನು ತೀವ್ರವಾಗಿ ಖಂಡಿಸಿ, ಕೊಲೆಗಾರನನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದರು.

ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಯಲ್ಲಾಪುರದಲ್ಲೇ ಠಿಕಾಣಿ ಹೂಡಿದ್ದರು. ವಿವಿಧ ಹಿಂದೂ ಸಂಘಟನೆಗಳು ಇಂದು ಯಲ್ಲಾಪುರ ಬಂದ್ ಗೆ ಕರೆ ನೀಡಿದ್ದವು. ಕೆಲ ಸಂಘಟನೆಗಳ ಪ್ರಮುಖರು ಠಾಣೆಗೆ ಜಮಾಯಿಸಿ, ಆರೋಪಿ ಬಂಧಿಸುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಇದನ್ನೂ ಓದಿ:  ಬಳ್ಳಾರಿ ಪ್ರಕರಣ: Z ಶ್ರೇಣಿಯ ಭದ್ರತೆ ಕೇಳಿ ಶಾಸಕ ಜನಾರ್ದನ ರೆಡ್ಡಿ ಪತ್ರ

ಇದರ ಮಧ್ಯೆಯೇ ಭಾನುವಾರ ಬೆಳಗ್ಗೆ, ಯಲ್ಲಾಪುರದ ಸಮೀಪದ ಕಾಡಿನಲ್ಲಿ ರಫಿಕ್ ಯಳ್ಳೂರ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ವಿಚ್ಛೇದಿತ ವಿವಾಹಿತೆಯ ದುರ್ಘಟನೆ: ಮೃತ ರಂಜಿತಾ ಬನ್ನೊಡೆ ಅವರು ಸುಮಾರು 12 ವರ್ಷಗಳ ಹಿಂದೆ ಸೊಲ್ಲಾಪುರದ ಸಚೀನ್ ಕಾಟೇರ್ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಮಗು ಜನಿಸಿದ್ದು, ಐದು ವರ್ಷಗಳ ಬಳಿಕ ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾಗಿತ್ತು. ನಂತರ ರಂಜಿತಾ ಅಕ್ಕನ ಮನೆಯಲ್ಲಿ ವಾಸವಾಗಿದ್ದು, ಇತ್ತೀಚೆಗೆ ಪತಿಯಿಂದ ವಿಚ್ಛೇದನ ಪಡೆದಿದ್ದರು.

ಜೀವನೋಪಾಯಕ್ಕಾಗಿ ರಂಜಿತಾ ಬಿಸಿಯೂಟ ಯೋಜನೆಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸದ್ಯ ರಾಮಾಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ:  ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ

ಕೊಲೆ ಉದ್ದೇಶವೇ?: ರಫಿಕ್, ಮದುವೆ ಪ್ರಸ್ತಾಪಕ್ಕೆ ರಂಜಿತಾ ಒಪ್ಪದಿದ್ದರೆ ಕೊಲೆ ಮಾಡಬೇಕು ಎಂಬ ಉದ್ದೇಶದಿಂದಲೇ ಪೂರ್ವಯೋಜಿತ ಸಂಚು ರೂಪಿಸಿದ್ದಾನೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಮೊದಲಿನಿಂದ ಪರಿಚಿತಳಾಗಿದ್ದ ರಂಜಿತಾ, ಪತಿಯಿಂದ ದೂರವಾದ ಬಳಿಕ ರಫಿಕ್ ಆಕೆಯೊಂದಿಗೆ ಇನ್ನಷ್ಟು ಸಲಿಗೆಯಿಂದ ವರ್ತಿಸಲು ಯತ್ನಿಸಿದ್ದ ಎನ್ನಲಾಗಿದೆ. ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿವೆ.

ರಂಜಿತಾ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ರಫಿಕ್ ಕೋಪಗೊಂಡು, ಕೊಲೆ ಉದ್ದೇಶದಿಂದಲೇ ಚಾಕು ಹಿಡಿದು ಬಂದು ಆಕೆಯನ್ನು ಅಡ್ಡಗಟ್ಟಿ ಕುತ್ತಿಗೆಗೆ ಇರಿದಿದ್ದಾನೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿಬಂದಿವೆ. ಈ ಎಲ್ಲ ಅಂಶಗಳು ಪೂರ್ವನಿಯೋಜಿತ ಸಂಚು ಎಂಬ ಶಂಕೆಗೆ ಬಲ ನೀಡುತ್ತಿವೆ.


ಅಕ್ಕನ ವಿರೋಧ – ಮನೆಗೆ ಬಾರದಂತೆ ಎಚ್ಚರಿಕೆ: ರಫಿಕ್ ಮತ್ತು ರಂಜಿತಾ ಇಬ್ಬರೂ ಒಟ್ಟಿಗೇ ಓದಿದ ಸಹಪಾಠಿಗಳು ಎಂದು ತಿಳಿದುಬಂದಿದೆ. ವಿವಾಹ ವಿಚ್ಛೇದನದ ನಂತರ ರಫಿಕ್ ರಂಜಿತಾಳಿಗೆ ಇನ್ನಷ್ಟು ಹತ್ತಿರವಾಗಲು ಯತ್ನಿಸಿದ್ದ ಎನ್ನಲಾಗಿದೆ. ಸಹಪಾಠಿಗಳಾಗಿದ್ದರಿಂದ ಆರಂಭದಲ್ಲಿ ಸಹಜ ಮಾತುಕತೆ ನಡೆಯುತ್ತಿದ್ದರೂ, ನಂತರ ಮೊಬೈಲ್ ಮೂಲಕ ನಿರಂತರ ಸಂಪರ್ಕ ಸಾಧಿಸಿ ಪ್ರೀತಿಯ ಒತ್ತಡ ಹೇರಿದ್ದಾನೆ ಎಂಬ ಆರೋಪಗಳಿವೆ.

ಪರಿಚಯದ ನೆಪದಲ್ಲಿ ರಫಿಕ್, ರಂಜಿತಾ ವಾಸವಿದ್ದ ಮನೆಗೆ ಬರುತ್ತಿದ್ದ. ಇದನ್ನು ರಂಜಿತಾಳ ಅಕ್ಕ ತೀವ್ರವಾಗಿ ವಿರೋಧಿಸಿ, ಮನೆಗೆ ಬಾರದಂತೆ ಎಚ್ಚರಿಕೆ ನೀಡಿದ್ದಳು. ಆ ಬಳಿಕ ಕೆಲಕಾಲ ರಫಿಕ್ ಅಲ್ಲಿಗೆ ಸುಳಿಯದಿದ್ದರೂ, ಕೊನೆಗೆ ಈ ದುರ್ಘಟನೆ ನಡೆದಿರುವುದು ಎಲ್ಲರಲ್ಲೂ ಆಘಾತ ಮೂಡಿಸಿದೆ.

Previous articleಬಳ್ಳಾರಿ ಪ್ರಕರಣ: Z ಶ್ರೇಣಿಯ ಭದ್ರತೆ ಕೇಳಿ ಶಾಸಕ ಜನಾರ್ದನ ರೆಡ್ಡಿ ಪತ್ರ