ಹೊನ್ನಾವರ (ಉತ್ತರ ಕನ್ನಡ): ಬಡಗು ತಿಟ್ಟು ಯಕ್ಷಗಾನ ಹಿಮ್ಮೇಳ ರಂಗದ ಪ್ರಖ್ಯಾತ ಮದ್ದಳೆ ವಾದಕ, “ಮದ್ದಳೆ ಮಾಂತ್ರಿಕ” ಎಂದೇ ಖ್ಯಾತಿ ಪಡೆದಿದ್ದ ಕರ್ಕಿ ಪ್ರಭಾಕರ ಭಂಡಾರಿ ಅವರು ಶನಿವಾರ (ಜ.3) ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರ ನಿಧನದಿಂದ ಯಕ್ಷಗಾನ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ.
ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದವರಾದ ಪ್ರಭಾಕರ ಭಂಡಾರಿ ಅವರು ಯಕ್ಷಗಾನ ಹಿಮ್ಮೇಳ ರಂಗಕ್ಕೆ ಅಪರೂಪದ ಕೊಡುಗೆ ನೀಡಿದ ಕಲಾವಿದರಾಗಿದ್ದರು. ಮದ್ದಳೆ ವಾದನದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು, ಮದ್ದಳೆಯ ನಾದ, ಲಯ ಮತ್ತು ಭಾಷೆಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ವಾದನ ಮಾಡುವ ಅಪೂರ್ವ ಶೈಲಿಗೆ ಹೆಸರಾಗಿದ್ದರು. ಇದೇ ಕಾರಣದಿಂದ ಯಕ್ಷಗಾನ ವಲಯದಲ್ಲಿ ಅವರನ್ನು “ಮದ್ದಳೆ ಮಾಂತ್ರಿಕ” ಎಂದು ಗೌರವದಿಂದ ಕರೆಯಲಾಗುತ್ತಿತ್ತು.
ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ
ಮದ್ದಳೆ ವಾದನ ಮಾತ್ರವಲ್ಲದೆ, ಚೆಂಡೆ–ಮದ್ದಳೆ ತಯಾರಿಕೆಯಲ್ಲಿ ಸಹ ಅವರು ನಿಪುಣರಾಗಿದ್ದರು. ಯಕ್ಷಗಾನ ವಾದ್ಯಗಳ ತಂತ್ರಜ್ಞಾನ ಮತ್ತು ಪರಂಪರೆಯ ಜ್ಞಾನವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಿದ ಕಲಾ ಸಾಧಕರಾಗಿ ಅವರು ಗುರುತಿಸಿಕೊಂಡಿದ್ದರು. ಅವರ ಪುತ್ರ ಪರಮೇಶ್ವರ ಭಂಡಾರಿ ಕೂಡ ಪ್ರಖ್ಯಾತ ಮದ್ದಳೆ ವಾದಕರಾಗಿದ್ದು, ತಂದೆಯ ಕಲಾ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.
ಪ್ರಭಾಕರ ಭಂಡಾರಿ ಅವರು ಗುಂಡಬಾಳ ಮೇಳ, ಇಡಗುಂಜಿ ಮೇಳ, ಡೇರೆ ಮೇಳ, ಸಾಲಿಗ್ರಾಮ ಮೇಳ ಸೇರಿದಂತೆ ಅನೇಕ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಮದ್ದಳೆ ವಾದಕರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ದಿಗ್ಗಜ ಭಾಗವತ ಕಾಳಿಂಗ ನಾವಡ ಸೇರಿದಂತೆ ಅನೇಕ ಹಿರಿಯ ಭಾಗವತರೊಂದಿಗೆ ಮದ್ದಳೆಯಲ್ಲಿ ಸಾಥ್ ನೀಡಿ, ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದರು.
ಇದನ್ನೂ ಓದಿ: 153 ಎಕರೆಗಳಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ – ಸಚಿವ ಸಂಪುಟದ ಒಪ್ಪಿಗೆ
ಅವರ ಮದ್ದಳೆ ವಾದನದಲ್ಲಿ ಲಯಬದ್ಧತೆ, ನಾದಮಾಧುರ್ಯ ಮತ್ತು ಪಾತ್ರದ ಭಾವನೆಗೆ ತಕ್ಕ ಸ್ಪಂದನೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹಿಮ್ಮೇಳ ರಂಗದಲ್ಲಿ ವಾದಕರ ಪಾತ್ರ ಎಷ್ಟು ಮಹತ್ವದ್ದೆಂಬುದನ್ನು ತಮ್ಮ ಕಲಾ ಜೀವನದ ಮೂಲಕ ಸಾಬೀತುಪಡಿಸಿದವರು ಕರ್ಕಿ ಪ್ರಭಾಕರ ಭಂಡಾರಿ.
ಅವರ ನಿಧನಕ್ಕೆ ಯಕ್ಷಗಾನ ಕಲಾವಿದರು, ಕಲಾಸಕ್ತರು ಮತ್ತು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಬಡಗು ತಿಟ್ಟು ಯಕ್ಷಗಾನ ರಂಗದ ಒಂದು ಮಹತ್ವದ ಅಧ್ಯಾಯ ಮುಕ್ತಾಯವಾಯಿತು ಎಂಬ ಭಾವನೆ ಮೂಡಿಸಿದೆ.
ಇದನ್ನೂ ಓದಿ: ಹಾರ್ನ್‌ಬಿಲ್ ಪಕ್ಷಿಗಳ ಆವಾಸ ನಾಶ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಬಡಗು ತಿಟ್ಟು ಯಕ್ಷಗಾನ ಹಿಮ್ಮೇಳ ರಂಗದ ಖ್ಯಾತ ಮದ್ದಳೆ ವಾದಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ಕಿ ಪ್ರಭಾಕರ ಭಂಡಾರಿ ಅವರು ನಿಧನರಾಗಿದ್ದಾರೆ. 1941ರಲ್ಲಿ ಹೊನ್ನಾವರ ತಾಲೂಕಿನ ಕರ್ಕಿಯಲ್ಲಿ ಜನಿಸಿದ್ದ ಅವರು ಪಾಂಡುರಂಗ ಭಂಡಾರಿ–ಹೊನ್ನಮ್ಮ ದಂಪತಿಯ ಪುತ್ರರಾಗಿದ್ದರು.
ಪ್ರಭಾಕರ ಭಂಡಾರಿ ಅವರು ಗುಂಡಬಾಳ ಅಮೃತೇಶ್ವರೀ, ಕರ್ಕಿ ಇಡಗುಂಜಿ ಹಾಗೂ ಸಾಲಿಗ್ರಾಮ ಮೇಳಗಳಲ್ಲಿ ಪ್ರಧಾನ ಮದ್ದಳೆ ವಾದಕರಾಗಿ ಸೇವೆ ಸಲ್ಲಿಸಿದ್ದರು. ಕಿನ್ನೀರು ನಾರಾಯಣ ಹೆಗಡೆ, ಬಿಳಿಂಜ ತಿಮ್ಮಪ್ಪ ನಾಯಕ, ಹಿರಿಯಡ್ಕ ಗೋಪಾಲರಾಯರಂತಹ ದಿಗ್ಗಜರೊಂದಿಗೆ ಮದ್ದಳೆಯಲ್ಲಿ ಸಾಥ್ ನೀಡಿದ್ದರು.
ಮದ್ದಳೆ ಕಲೆಗೆ ತಂದೆಯೇ ಮೊದಲ ಗುರುವಾಗಿದ್ದು, ಚಂಡೆ–ಮದ್ದಳೆ, ತಬಲಾ ಮೊದಲಾದ ಚರ್ಮವಾದ್ಯಗಳ ತಯಾರಿಕೆಯಲ್ಲಿ ಪರಿಣಿತರಾಗಿದ್ದರು. ಪ್ರತಿವರ್ಷ ಗಣಪತಿ ಮೂರ್ತಿ ತಯಾರಿಸುವಲ್ಲಿಯೂ ಅವರು ಹೆಸರುವಾಸಿಯಾಗಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನಾರಾಯಣಪ್ಪ ಉಪ್ಪೂರ, ಕಾಳಿಂಗ ನಾವುಡ, ಕೆರೆಮನೆ ಮಹಾಬಲ ಹೆಗಡೆ, ಗಜಾನನ ಹೆಗಡೆ, ಪಳ್ಳಿ ಸೋಮನಾಥ ಹೆಗಡೆ, ಕಿದಿಯೂರ ಜನಾರ್ಧನ ಆಚಾರ್ಯ, ಚಂದ್ರಮ್ಮ ಗಣಪಯ್ಯ ಹಂದೆ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಸಂದಿವೆ.
ಅವರಿಗೆ ಪತ್ನಿ ಶಾರದಾ ಹಾಗೂ ಪುತ್ರರು ಮಂಜುನಾಥ, ಪರಮೇಶ್ವರ ಮತ್ತು ಉಮೇಶ ಇದ್ದಾರೆ. ಅವರ ನಿಧನದಿಂದ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.









