ಜನವರಿ 16 ಮತ್ತು 17ರಂದು ಹಾರ್ನ್‌ಬಿಲ್ ಹಬ್ಬ
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರವು ದೇಶದಲ್ಲೇ ಪ್ರಸಿದ್ಧವಾದ ಹಾರ್ನ್‌ಬಿಲ್ ಸಂರಕ್ಷಿತ ಪ್ರದೇಶ (Hornbill Zone) ಆಗಿ ಗುರುತಿಸಿಕೊಂಡಿದೆ. ಕಾಳಿ ನದಿಯ ತೀರದಲ್ಲಿರುವ ದಟ್ಟ ಅರಣ್ಯ, ಗಿಡಮರಗಳು, ನೀರು ಮತ್ತು ಆಹಾರದ ಸಮೃದ್ಧತೆಯಿಂದ ಹಾರ್ನ್‌ಬಿಲ್ ಪಕ್ಷಿಗಳು ಇಲ್ಲಿ ಸಹಜವಾಗಿ ವಾಸಿಸುತ್ತಿದ್ದು, ದೇಶ-ವಿದೇಶಗಳಿಂದ ಬರುವ ಪಕ್ಷಿವೀಕ್ಷಕರಿಗೆ ಅಪಾರ ಸಂತಸ ನೀಡುತ್ತಿವೆ.
ದಾಂಡೇಲಿಯ ಕಾಳಿ ನದಿ ತೀರದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಸೇರಿದ ವಿಶ್ರಾಂತಿಗೃಹಗಳು ಇದ್ದು, ಪ್ರವಾಸಿಗರ ಅನುಕೂಲಕ್ಕಾಗಿ ನದಿ ದಂಡೆಯಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಈ ಗೋಪುರದಿಂದ ಕಾಳಿ ನದಿಯ ಸುಂದರ ದೃಶ್ಯಗಳ ಜೊತೆಗೆ ಮೊಸಳೆ ಹಾಗೂ ಹಾರ್ನ್‌ಬಿಲ್ ಪಕ್ಷಿಗಳ ವೀಕ್ಷಣೆ ಸಾಧ್ಯವಾಗಿತ್ತು.
ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ
ವೀಕ್ಷಣಾ ಗೋಪುರದ ಕೆಳಗೆ ಮರಗಳ ಕಡಿತ: ಇತ್ತೀಚೆಗೆ ನಡೆದ ಘಟನೆ ಪರಿಸರ ಪ್ರೇಮಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೀಕ್ಷಣಾ ಗೋಪುರದ ಕೆಳಭಾಗದಲ್ಲಿದ್ದ ಬಿಳಿ ಮತ್ತಿ, ಬಾಂಬು ಹಾಗೂ ಇತರೆ ಜಾತಿಯ ಮರಗಳು ಹಾರ್ನ್‌ಬಿಲ್ ಪಕ್ಷಿಗಳಿಗೆ ಆಶ್ರಯವಾಗಿದ್ದವು. ಸ್ಥಳೀಯ ಭೌಗೋಳಿಕ ಹಾಗೂ ಪರಿಸರ ಸಂವೇದನೆ ಬಗ್ಗೆ ತಿಳುವಳಿಕೆ ಇಲ್ಲದ ಹಿರಿಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರ ಆದೇಶದ ಮೇರೆಗೆ ನದಿ ದಂಡೆಯಲ್ಲಿದ್ದ ಗಿಡಗಂಟಿ ಮತ್ತು ಮರಗಳನ್ನು ಸಂಪೂರ್ಣವಾಗಿ ಕಡಿದು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದಾಗಿ ಹಾರ್ನ್‌ಬಿಲ್ ಪಕ್ಷಿಗಳ ಪ್ರಮುಖ ಆವಾಸಸ್ಥಾನವೇ ನಾಶವಾಗಿದ್ದು, ಈ ಪ್ರದೇಶದಲ್ಲಿ ಅವುಗಳ ಚಲನವಲನಕ್ಕೂ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅರಣ್ಯ ಇಲಾಖೆಯ ಮೌನ: ಘಟನಾ ಸ್ಥಳದ ಪಕ್ಕದಲ್ಲೇ ಅರಣ್ಯ ಇಲಾಖೆಯ ವಿಶ್ರಾಂತಿಗೃಹ ಇದ್ದರೂ, ಅಲ್ಲಿನ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಈ ಕೃತ್ಯವನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗಂಭೀರ ಆರೋಪವಾಗಿದೆ. ಪರಿಸರ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಇಲಾಖೆಯೇ ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಇದನ್ನೂ ಓದಿ: 153 ಎಕರೆಗಳಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ – ಸಚಿವ ಸಂಪುಟದ ಒಪ್ಪಿಗೆ
ತಪ್ಪಿತಸ್ಥರ ಬದಲು ಕೆಳಸಿಬ್ಬಂದಿಗೆ ಎಫ್‌ಐಆರ್?: ಘಟನೆಯ ಬಳಿಕ ಪಕ್ಷಿವೀಕ್ಷಣೆಗೆ ತೆರಳಿದ್ದ ಸ್ಥಳೀಯ ನ್ಯಾಚುರಲಿಸ್ಟ್ ಒಬ್ಬರು ಈ ಅನ್ಯಾಯವನ್ನು ಪ್ರಶ್ನಿಸಿದಾಗ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ನಿಜವಾದ ಹೊಣೆಗಾರ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬದಲು, ಲೋಕೋಪಯೋಗಿ ಇಲಾಖೆಯ ವಿಶ್ರಾಂತಿಗೃಹದ ಉಸ್ತುವಾರಿ ಅಧಿಕಾರಿಯ ಮೇಲೆ ಎಫ್‌ಐಆರ್ ದಾಖಲಿಸದೇ, ಅಲ್ಲಿನ ಕೆಳ ಹಂತದ ಅಡಿಗೆಯವನ ಮೇಲೆ ಎಫ್‌ಐಆರ್ ದಾಖಲಿಸಿ ಪ್ರಕರಣವನ್ನು ಮುಚ್ಚಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಾರ್ನ್‌ಬಿಲ್ ಹಬ್ಬಕ್ಕೂ ಮುನ್ನವೇ ವಿವಾದ: ಜನವರಿ 16 ಮತ್ತು 17ರಂದು ನಡೆಯಲಿರುವ ಹಾರ್ನ್‌ಬಿಲ್ ಹಬ್ಬದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪರಿಸರಾಸಕ್ತರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಿದೆ. ಸಭೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌಹಾಣ ಸಲಹೆಗಳನ್ನು ಆಹ್ವಾನಿಸಿದ ವೇಳೆ, ಪರಿಸರ ಕಾರ್ಯಕರ್ತ ಮಿಲಿಂದ ಅವರು ಹಾರ್ನ್‌ಬಿಲ್ ಆವಾಸ ನಾಶದ ಬಗ್ಗೆ ಪ್ರಶ್ನಿಸಿದಾಗ, ಅಧಿಕಾರಿಗಳು ಸ್ಪಷ್ಟ ಉತ್ತರ ನೀಡದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರ ಆಗ್ರಹ: ಹಾರ್ನ್‌ಬಿಲ್ ಪಕ್ಷಿಗಳ ಸಂರಕ್ಷಣೆಗೆ ಗಂಭೀರವಾಗಿ ವಿಫಲವಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಈ ಘಟನೆ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂಬುದು ಪರಿಸರಾಸಕ್ತರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.









