ಪಶ್ಚಿಮ ಪದವೀಧರರ ಮತಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ

0
1

ದಾಂಡೇಲಿ: ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ನವೆಂಬರ್ 1, 2025ಕ್ಕೆ ಅನ್ವಯವಾಗುವಂತೆ ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಮತಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ತಿಳಿಸಿದ್ದಾರೆ.

ನಿಗದಿತ ಅವಧಿಯಲ್ಲಿ ಸ್ವೀಕರಿಸಲಾದ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳ ಪರಿಶೀಲನೆಯ ನಂತರ, ಅಂತಿಮ ಮತದಾರರ ಪಟ್ಟಿಯು ಮತದಾರರ ನೋಂದಣಿ ಅಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ, ಜಿಲ್ಲಾಧಿಕಾರಿಗಳು ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆ ಇವರ ಕಚೇರಿಯಲ್ಲಿ ಹಾಗೂ ಅವರ ವ್ಯಾಪ್ತಿಯಲ್ಲಿ ಬರುವ ಎಲ್ಲ ನಿಯೋಜಿತ ಅಧಿಕಾರಿಗಳ ಕಚೇರಿಗಳಲ್ಲಿ ಲಭ್ಯವಿರುತ್ತದೆ. ಅದೇ ರೀತಿ ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ಇವರ www.ceokarnataka.kar.nic.in ವೆಬ್‌ಸೈಟ್‌ನಲ್ಲಿ ಹಾಗೂ ಈ ಕಾರ್ಯಾಲಯದ ವೆಬ್‌ಸೈಟ್ https://rcbelagavi.karnataka.gov.in ನಲ್ಲಿಯೂ ಕೂಡಾ ಲಭ್ಯವಿರುತ್ತದೆ.

ಪಶ್ಚಿಮ ಪಧವೀದರರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದ೦ತೆ ಅಂತಿಮ ಮತದಾರರ ಪಟ್ಟಿಯಲ್ಲಿ 51,599 ಪುರುಷ ಮತದಾರರು ಮತ್ತು 36,488 ಮಹಿಳಾ ಮತದಾರರು ಸೇರಿದಂತೆ ಒಟ್ಟು 88,087 ಮತದಾರರಿದ್ದಾರೆ.

ಅಂತಿಮ ಮತದಾರರ ಪಟ್ಟಿಯಲ್ಲಿ ತಪ್ಪಿಹೋದ ಅರ್ಹ ಪದವೀಧರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಲು ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕಕ್ಕೆ 10 ದಿನಗಳ ಮೊದಲು ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ಮತದಾರರ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.

Previous articleಬಳ್ಳಾರಿಯಲ್ಲಿ ಶಾಸಕರ ಬೆಂಬಲಿಗರ ಘರ್ಷಣೆ: ಎಡಿಜಿಪಿ ದೌಡು