ವಿಜಯಪುರ: ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲರ ನಿವಾಸಕ್ಕೆ ಮುತ್ತಿಗೆ ಹಾಕಲು ಅಣಿಯಾಗುತ್ತಿದ್ದ ಶ್ರೀ ಸಂಗನಬಸವ ಸ್ವಾಮೀಜಿ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ ಪೊಲೀಸರು ತಮ್ಮ ವಶಕ್ಕೆ ಪಡೆದು ಝಳಕಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಪ್ರತಿಭಟನಾಕಾರರು ಮುಗಳಖೋಡ ಮಠದ ಹತ್ತಿರ ಆಗಮಿಸುತ್ತಿದ್ದಂತೆ ತಡೆಯುವ ಪ್ರಯತ್ನ ಮಾಡಿದರು. ಈ ವೇಳೆ ಪೊಲೀಸರು ಹಾಗೂ ಹುಣಶ್ಯಾಳ ಪಿ.ಬಿ.ಯ ಶ್ರೀ ಸಂಗನಬಸವ ಸ್ವಾಮೀಜಿಗಳ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಶ್ರೀಗಳ ಕಾವಿ ಬಟ್ಟೆಗೆ ಕಾಲರ್ ರೀತಿಯಲ್ಲಿ ಹಿಡಿದು ಎಳೆಯಲು ಮುಂದಾದಾಗ ಶ್ರೀಗಳು ಅದನ್ನು ಹಿಮ್ಮೆಟ್ಟಿಸಿ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ, ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಪೊಲೀಸರು ಈ ರೀತಿ ಶ್ರೀಗಳ ಜೊತೆ ವರ್ತನೆ ಮಾಡುವುದು ಸರಿಯಲ್ಲ ಎಂಬ ಅಸಮಾಧಾನವೂ ಪ್ರತಿಭಟನಾ ನಿರತರಿಂದ ವ್ಯಕ್ತವಾಯಿತು. ಈ ವೇಳೆ ಪೊಲೀಸರು ಅಲ್ಲಿದ್ದ ಪ್ರತಿಭಟನಾ ನಿರತರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿ ಕೆಲವರಿಗೆ ಝಳಕಿ, ಇನ್ನೂ ಕೆಲವರಿಗೆ ಹೊರ್ತಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ಮಾಹಿತಿ ಲಭ್ಯವಾಗಿದೆ.
ಪ್ರತಿಭಟನಾ ನಿರತ ಅನೀಲ ಹೊಸಮನಿ, ಭಿ. ಭಗವಾನ ರೆಡ್ಡಿ, ಸಿದ್ಧಲಿಂಗ ಬಾಗೇವಾಡಿ, ಭೋಗೇಶ ಸೋಲಾಪೂರ, ಅರವಿಂದ ಕುಲಕರ್ಣಿ, ಸದಾಶಿವ ಬಟಗಿ, ಸುರೇಖಾ ರಜಪೂತ, ಸೇರಿದಂತೆ 20 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಹೋರಾಟಗಾರರ ಆಕ್ರೋಶ: ಅತ್ತ ಪ್ರತಿಭಟನಾಕಾರರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಂತೆ ಕಳೆದ 105 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಅನೇಕ ಕನ್ನಡಪರ ಸಂಘಟನೆಗಳ ಪ್ರಮುಖರು, ರೈತ ಸಂಘಟನೆಯ ಪ್ರಮುಖರು ಜಮಾಯಿಸಿದರು.
ಪ್ರತಿಭಟನಾ ಸ್ಥಳದಿಂದ ಗುಡುಗಿದ ಸುರೇಶ ಬಿಜಾಪೂರ, ಶ್ರೀಶೈಲ ಮಳಜಿ ಸೇರಿದಂತೆ ಹಲವಾರು ಮುಖಂಡರು, ಈ ರೀತಿ ಹೋರಾಟ ನಿರತ ಸ್ವಾಮೀಜಿಗಳ ಮೇಲೆ ಹಾಗೂ ಹೋರಾಟಗಾರರ ಮೇಲೆ ಪೊಲೀಸರು ಈ ರೀತಿ ದಮನಕಾರಿ ರೀತಿ ಪ್ರದರ್ಶಿಸಿರಿರುವುದು ಸರಿಯಲ್ಲ, ಇದು ಜನಪರವಾದ ಹೋರಾಟ, ಈ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮೊದಲ ದಿನದಿಂದಲೂ ನಡೆಯುತ್ತಿದೆ, ಹೋರಾಟವನ್ನು ಹಿಂದಕ್ಕೆ ಪಡೆಯಿರಿ ಎಂಬ ಒತ್ತಡವೂ ಹೋರಾಟಗಾರರ ಮೇಲಿದೆ, ಈಗ ಹೋರಾಟಗಾರರನ್ನು ಪೊಲೀಸ್ ಬಲ ಪ್ರಯೋಗಿಸಿ ಬಂಧಿಸಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಹೋರಾಟ ನಿರತ ಸ್ವಾಮೀಜಿಗಳನ್ನು ಹಾಗೂ ಪ್ರತಿಭಟನಾ ನಿರತರನ್ನು ಬಿಡುಗಡೆಗೊಳಿಸಬೇಕು, ಇದು ಜನರಿಗಾಗಿ ನಡೆಯುತ್ತಿರುವ ಹೋರಾಟ, ಜನಾಂದೋಲನದ ಹೋರಾಟ, ಈ ಹೋರಾಟ ಎಷ್ಟೇ ದಮನಕಾರಿ ನೀತಿಯನ್ನು ಪ್ರಯೋಗಿಸಿದರೂ ನಿಲ್ಲುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕಳೆದ ಹಲವಾರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಹೋರಾಟಗಾರರು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ವಿಳಂಬ ನೀತಿ ಅನುಸರಿಸಿದ ಹಿನ್ನೆಲೆಯಲ್ಲಿ ಸಚಿವ ಡಾ.ಎಂ.ಬಿ. ಪಾಟೀಲ, ನಂತರ ಶಿವಾನಂದ ಪಾಟೀಲ ಹಾಗೂ ನಗರ ಶಾಸಕರ ಎದುರು ಧರಣಿ ನಡೆಸಲು ತೀರ್ಮಾನ ಕೈಗೊಂಡಿದ್ದರು. ಈಗ ಹೋರಾಟದ ಭಾಗವಾಗಿ ಸಚಿವರ ಮನೆ ಎದುರು ಧರಣಿಗೆ ಅಣಿಯಾದ ವೇಳೆ ಈ ಎಲ್ಲ ವಿದ್ಯಮಾನ ನಡೆದಿದೆ.























