ಮಂಗಳೂರು: ಹೊಸ ವರ್ಷದ ಮೊದಲನೆಯ ದಿನ ಜಿಲ್ಲೆಯ ದೇವಸ್ಥಾನಗಳಲ್ಲಿ ಭಕ್ತರ ಸಂದಣಿ ಹೆಚ್ಚಿದೆ. ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಭಕ್ತರು ಮೊದಲನೇ ದಿನದ ಮುಂಜಾವಿನಲ್ಲಿ ಗೋಕರ್ಣನಾಥನ ಬೆಳ್ಳಿ ರಥವನ್ನು ಎಳೆಯುವ ಮೂಲಕ ಕೃತಾರ್ಥರಾಗಿದ್ದಾರೆ.
ಬೆಳ್ಳಿ ರಥೋತ್ಸವ: ಮಾಜಿ ಕೇಂದ್ರ ಸಚಿವ, ದೇವಳದ ರೂವಾರಿ ಬಿ. ಜನಾರ್ಧನ ಪೂಜಾರಿಯವರ ಪರಿಕಲ್ಪನೆಯಂತೇ ಪ್ರತಿ ವರ್ಷ ವರ್ಷದ ಮೊದಲನೆಯ ದಿನ ಶ್ರೀ ದೇವರ ಬೆಳ್ಳಿರಥೋತ್ಸವ ಈ ಬಾರಿಯೂ ಅದ್ಧೂರಿಯಿಂದ ನಡೆದಿದೆ. ವರ್ಷದದ ಮೊದಲನೇಯ ದಿನದ ಸೂರ್ಯೋದಯದ ವೇಳೆ ದೇವಸ್ಥಾನದಲ್ಲಿ ಬೆಳ್ಳಿ ರಥೋತ್ಸವ ನಡೆದಿದೆ.
ಧನು ಪೂಜೆ: ಗಣಪತಿಗೆ ಗಣಹೋಮದ ಬಳಿಕ ಗೋಕರ್ಣನಾಥ ದೇವರಿಗೆ ಧನು ಪೂಜೆ ನೆರವೇರಿದೆ. ಬೆಳ್ಳಗ್ಗೆ 6.15 ಗಂಟೆ ಹೊತ್ತಿಗೆ ದೇವಳದ ಒಳಭಾಗದಿಂದ ದೇವರ ಉತ್ಸವ ಮೂರ್ತಿಯನ್ನು ಅರ್ಚಕರು ಹೊರತಂದು ಬೆಳ್ಳಿ ರಥಾರೂಢವಾಗಿಸಿದ್ದಾರೆ. ರಥದಲ್ಲಿ ಪೂಜೆ ಆರತಿ ಆದ ಬಳಿಕ ಬೆಳ್ಳಿ ರಥೋತ್ಸವ ನಡೆದಿದೆ.
ಇದನ್ನೂ ಓದಿ: 2026ಕ್ಕೆ ಸಂಯುಕ್ತ ಕರ್ನಾಟಕದ 26 ಅಜೆಂಡಾ
ದೇವಳದ ಸುತ್ತಾ ಮೂರು ಬಾರಿ ಗೋಕರ್ಣನಾಥ ದೇವರಿರುವ ಬೆಳ್ಳಿ ರಥವನ್ನು ಬಂದಿರುವ ಭಕ್ತರು ಎಳೆದಿದ್ದಾರೆ.ಈ ಮೂಲಕ ವರ್ಷದ ಮೊದಲನೇಯ ದಿನವನ್ನು ದೇವರ ರಥ ಎಳೆಯುವ ಮೂಲಕ ಭಕ್ತರು ವರ್ಷದ ಶುಭಾರಂಭ ಮಾಡಿದ್ದಾರೆ.
ದೇವರ ದರ್ಶನ: ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಮಂಗಳಾದೇವಿ, ಉರ್ವ ಮಾರಿಗುಡಿ, ಬೋಳಾರ ಮಾರಿಗುಡಿ, ಶರವು ಮಹಾಗಣಪತಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು. ಹೊಸ ವರ್ಷವನ್ನು ದೇವರ ಆಶೀರ್ವಾದದೊಂದಿಗೆ ಆರಂಭಿಸಬೇಕೆಂಬ ಸಂಕಲ್ಪದೊಂದಿಗೆ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.
ದೇವಸ್ಥಾನವನ್ನು ಸುಂದರ ಹೂವುಗಳಿಂದ ಅಲಂಕರಿಸಲಾಗಿದ್ದು, ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಕೇವಲ ಮಂಗಳೂರಿನ ಭಕ್ತರು ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಮತ್ತು ಪ್ರವಾಸಿಗರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ, ಬೀಚ್ಗಳು ಮತ್ತು ರೆಸಾರ್ಟ್‌ಗಳಲ್ಲಿ ತಂಗಿ, ಹೊಸ ವರ್ಷದ ದಿನ ದೇವಾಲಯಗಳಿಗೆ ಭೇಟಿ ನೀಡಿದರು. ಕದ್ರಿ ದೇವಸ್ಥಾನದ ಮೇಲ್ಭಾಗದಲ್ಲಿರುವ ಏಳು ಕೆರೆಗಳಲ್ಲಿ ಪವಿತ್ರ ಸ್ನಾನ ಮಾಡಿ, ನಂತರ ಕಲಶ ಸ್ನಾನ ಕೈಗೊಂಡು ಭಕ್ತರು ದೇವರ ದರ್ಶನ ಪಡೆದರು.























