ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಗೆ ಫ್ಲೈಓವರ್ ನಿರ್ಮಾಣ

0
4

ಟೆಂಡರ್ ಪ್ರಕ್ರಿಯೆಗೆ ಮುನ್ನ ಮಹತ್ವದ ಸಭೆ ನಡೆಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ಕರ್ನಾಟಕದ ಅತಿ ದೊಡ್ಡ ಹಾಗೂ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರಗಳಲ್ಲಿ ಒಂದಾದ ಬೆಳಗಾವಿ ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ನಗರ ವಿಸ್ತರಣೆ, ವಾಹನಗಳ ಸಂಖ್ಯೆಯ ಹೆಚ್ಚಳ ಮತ್ತು ವ್ಯಾಪಾರಿಕ ಚಟುವಟಿಕೆಗಳ ವೃದ್ಧಿಯ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಅಗತ್ಯ ತೀವ್ರವಾಗಿದ್ದು, ಈ ಹಿನ್ನೆಲೆ ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಫ್ಲೈಓವರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಈ ಸಂಬಂಧ ಈಗಾಗಲೇ ರಾಜ್ಯ ಸಚಿವ ಸಂಪುಟದಿಂದ ಫ್ಲೈಓವರ್ ನಿರ್ಮಾಣ ಯೋಜನೆಗೆ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಆರಂಭಿಸುವ ಮುನ್ನ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಪೂರ್ವಸಿದ್ಧತಾ ಸಭೆಯನ್ನು ನಡೆಸಿದರು.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆಗಳ ಮೇಲೆ CBI ದಾಳಿ

ಯೋಜನೆಯ ರೂಪುರೇಷೆಗಳ ಕುರಿತು ಚರ್ಚೆ: ಸಭೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಟ್ರಾಫಿಕ್ ಕಂಟ್ರೋಲ್ ವಿಭಾಗ, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು ಭಾಗವಹಿಸಿದ್ದರು. ಫ್ಲೈಓವರ್ ಕಾಮಗಾರಿಯ ಅಂತಿಮ ಹಂತದ ರೂಪುರೇಷೆಗಳು, ತಾಂತ್ರಿಕ ಸವಾಲುಗಳು ಹಾಗೂ ಸಂಚಾರ ನಿರ್ವಹಣೆ ಕುರಿತು ಸವಿಸ್ತಾರವಾದ ಚರ್ಚೆ ನಡೆಯಿತು.

ಫ್ಲೈಓವರ್ ನಿರ್ಮಾಣವನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸುವ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದ್ದು, ಮೊದಲ ಹಂತದಲ್ಲಿ ರಾಣಿ ಚೆನ್ನಮ್ಮ ವೃತ್ತದಿಂದ ಕಾಮಗಾರಿ ಪ್ರಾರಂಭಿಸಿ ಅದನ್ನು ಸಂಪೂರ್ಣವಾಗಿ ಮುಗಿಸಿದ ನಂತರ, ಮುಂದಿನ ಎರಡು ಹಂತಗಳಲ್ಲಿ ಕ್ರಮಬದ್ಧವಾಗಿ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಯಿತು.

ಇದನ್ನೂ ಓದಿ: ಪ್ರೀತಿಯಿಂದ ಪರಮೇಶ್ವರ್ ಸಿಎಂ ಮಾಡಿ ಅಂದ್ರೆ, ಬೇಡಾ ಅನ್ನೋಕಾಗುತ್ತಾ?

ಸಂಚಾರ ಸಮಸ್ಯೆ ತಪ್ಪಿಸಲು ಕಟ್ಟುನಿಟ್ಟಿನ ಸೂಚನೆ: ಕಾಮಗಾರಿಯ ಅವಧಿಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಪರ್ಯಾಯ ಸಂಚಾರ ವ್ಯವಸ್ಥೆಗಳನ್ನು ರೂಪಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇಲಾಖೆಗಳ ನಡುವೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಕಾಮಗಾರಿಯಿಂದ ನಗರ ಜೀವನ ಹಾಗೂ ಆಡಳಿತ ವ್ಯವಸ್ಥೆಗೆ ಅಡಚಣೆ ಆಗದಂತೆ ಯೋಜನೆಯನ್ನು ಸುಗಮವಾಗಿ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.

ಫ್ಲೈಓವರ್ ನಿರ್ಮಾಣದಿಂದ ಬೆಳಗಾವಿ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ನಗರ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂಬ ನಿರೀಕ್ಷೆಯನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

Previous articleಛೋಟಾ ಮುಂಬೈ ಹುಬ್ಬಳ್ಳಿ: ಕ್ರೈಂ ರಿವೈಂಡ್‌ 2025