ಸಿದ್ದು ಮೂಲಿಮನಿ ನಾಯಕತ್ವದ ‘ಸೀಟ್ ಎಡ್ಜ್’ಗೆ ಹೊಸ ಬಣ್ಣ: ‘ಲೈಫು ಯಾಕೋ ಖಾಲಿ ಖಾಲಿ…’ ಹಾಡು ರಿಲೀಸ್ – ಜನವರಿಯಲ್ಲಿ ಸಿನಿಮಾ ಬಿಡುಗಡೆ
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತನ್ನದೇ ಆದ ಅಭಿನಯ ಶೈಲಿಯಿಂದ ಗಮನ ಸೆಳೆದಿರುವ ನಟ ಸಿದ್ದು ಮೂಲಿಮನಿ ಇದೀಗ ನಾಯಕ ನಟನಾಗಿ ಅಭಿನಯಿಸಿರುವ ನೂತನ ಸಿನಿಮಾ ‘ಸೀಟ್ ಎಡ್ಜ್’ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಯುವ ನಿರ್ದೇಶಕ ಚೇತನ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
ಎನ್.ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗಿರಿಧರ ಟಿ. ವಸಂತಪುರ ಮತ್ತು ಸುಜಾತಾ ಗಿರಿಧರ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಡಾರ್ಕ್ ಕಾಮಿಡಿ, ಹಾರರ್ ಮತ್ತು ಥ್ರಿಲ್ಲರ್ ಅಂಶಗಳ ಮಿಶ್ರಣ ಹೊಂದಿರುವ ಈ ಸಿನಿಮಾ ಈಗಾಗಲೇ ವಿಭಿನ್ನ ಕಥಾಹಂದರದ ಕಾರಣದಿಂದ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಜನವರಿ 29 ರಿಂದ 17ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
ಹೊಸ ಹಾಡಿಗೆ ಮೆಚ್ಚುಗೆ: ಚಿತ್ರಕ್ಕೆ ಆಕಾಶ್ ಪರ್ವ ಸಂಗೀತ ಸಂಯೋಜನೆ ಮಾಡಿದ್ದು, ಈಗಾಗಲೇ ಎರಡು ಹಾಡುಗಳು ಮತ್ತು ‘ಲೂಪ್ – 1’ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿವೆ. ಇದೀಗ ‘ಲೈಫು ಯಾಕೋ ಖಾಲಿ ಖಾಲಿ…’ ಎಂಬ ಹೊಸ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ನಾಗಾರ್ಜುನ ಶರ್ಮಾ ಅವರ ಸಾಹಿತ್ಯಕ್ಕೆ ಸಿದ್ಧಾರ್ಥ ಬೆಳ್ಮಣ್ಣು ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ಆರ್.ಜೆ ರಘು ಅವರ ನೃತ್ಯ ನಿರ್ದೇಶನದಲ್ಲಿ ಸಿದ್ದು ಮೂಲಿಮನಿ ಹಾಗೂ ರಘು ರಾಮನಕೊಪ್ಪ ಕಲರ್‌ಫುಲ್ ಧಿರಿಸಿನಲ್ಲಿ ಸ್ಟೆಪ್ ಹಾಕಿದ್ದು, ಹಾಡಿಗೆ ವಿಶೇಷ ಆಕರ್ಷಣೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: OTTಗೆ ಲಗ್ಗೆಯಿಟ್ಟ ‘ಲವ್ ಯೂ ಮುದ್ದು’ – ಅಪರೂಪದ ಪ್ರೇಮಕಥೆಗೆ ಡಿಜಿಟಲ್ ವೇದಿಕೆ
ಕಥಾಹಂದರ ಮತ್ತು ತಾಂತ್ರಿಕ ಬಳಗ: ‘ಸೀಟ್ ಎಡ್ಜ್’ ಸಿನಿಮಾದ ಕಥೆ ಯೂಟ್ಯೂಬ್ ವ್ಲಾಗರ್ ಆಗಿರುವ ಯುವಕನೊಬ್ಬನ ಘೋಸ್ಟ್ ಹಂಟಿಂಗ್ ಅನುಭವಗಳ ಸುತ್ತ ಸಾಗುತ್ತದೆ. ಹಾಸ್ಯ ಮತ್ತು ಭಯವನ್ನು ಸಮತೋಲನವಾಗಿ ಮಿಶ್ರಣ ಮಾಡಿರುವ ಈ ಕಥೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ. ಬೆಂಗಳೂರು, ಮೈಸೂರು ಮತ್ತು ಶಿವಮೊಗ್ಗ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಚಿತ್ರದ ತಾಂತ್ರಿಕ ತಂಡದಲ್ಲಿ: ದೀಪಕ್ ಕುಮಾರ್ ಜೆ.ಕೆ – ಛಾಯಾಗ್ರಹಣ. ನಾಗೇಂದ್ರ ಉಜ್ಜನಿ – ಸಂಕಲನ. ತಾರಾಗಣ: ಸಿದ್ದು ಮೂಲಿಮನಿಗೆ ಜೋಡಿಯಾಗಿ ರವೀಕ್ಷಾ ಶೆಟ್ಟಿ ಅಭಿನಯಿಸಿದ್ದಾರೆ. ಜೊತೆಗೆ ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.
ಇದನ್ನೂ ಓದಿ: ಭಕ್ತಿಪ್ರಧಾನ ಕಥೆಯೊಂದಿಗೆ ಪ್ರೇಕ್ಷಕರ ಮನಗೆದ್ದ ‘ಆಚಾರ್ಯ ಶ್ರೀಶಂಕರ’
ಡಾರ್ಕ್ ಕಾಮಿಡಿ ಮತ್ತು ಹಾರರ್ ಥ್ರಿಲ್ಲರ್ ಶೈಲಿಯಲ್ಲಿನ ವಿಭಿನ್ನ ಪ್ರಯೋಗವಾಗಿರುವ ‘ಸೀಟ್ ಎಡ್ಜ್’, ಜನವರಿಯಲ್ಲಿ ತೆರೆಕಾಣುವ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ಉತ್ತರ ನೀಡಲಿದೆ























