ಮೂರನೇ ವಾರಕ್ಕೂ ದಾಪುಗಾಲು; ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರೇಕ್ಷಕರ ಸಂಖ್ಯೆ
ಚಂದನವನದಲ್ಲಿ ಕಮರ್ಷಿಯಲ್ ಸಿನಿಮಾಗಳ ಹಾವಳಿ ಹೆಚ್ಚಿರುವ ಈ ದಿನಗಳಲ್ಲಿ, ಭಕ್ತಿಪ್ರಧಾನ ಹಾಗೂ ದೈವಿಕ ಶಕ್ತಿಯನ್ನು ಒಳಗೊಂಡ ಕಥಾಹಂದರದ ಚಿತ್ರಗಳಿಗೆ ಇನ್ನೂ ಬಲವಾದ ಪ್ರೇಕ್ಷಕವೃಂದವಿದೆ ಎಂಬುದನ್ನು ‘ಆಚಾರ್ಯ ಶ್ರೀಶಂಕರ’ ಸಿನಿಮಾ ಮತ್ತೊಮ್ಮೆ ಸಾಬೀತುಪಡಿಸಿದೆ. ಕಪ್ಪು–ಬಿಳುಪು ಯುಗದಿಂದಲೂ ದೈವಿಕ ಕಥೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಆ ಪರಂಪರೆಯನ್ನು ಈ ಚಿತ್ರ ಸಮರ್ಥವಾಗಿ ಮುಂದುವರೆಸಿದೆ.
ಇಂದಿನ ಕಾಲಘಟ್ಟದಲ್ಲಿ ದೊಡ್ಡ ಸ್ಟಾರ್ ನಟರ ಚಿತ್ರಗಳೇ ಒಂದು ವಾರದ ಮೇಲೆ ಚಿತ್ರಮಂದಿರಗಳಲ್ಲಿ ಉಳಿಯುವುದು ಕಷ್ಟವಾಗಿರುವ ಸಂದರ್ಭದಲ್ಲಿ, ‘ಆಚಾರ್ಯ ಶ್ರೀಶಂಕರ’ ಚಿತ್ರವು ಯಶಸ್ವಿಯಾಗಿ ಎರಡು ವಾರಗಳ ಪ್ರದರ್ಶನ ಪೂರೈಸಿ ಇದೀಗ ಮೂರನೇ ವಾರಕ್ಕೂ ಪ್ರವೇಶಿಸಿರುವುದು ವಿಶೇಷ ಸಾಧನೆಯಾಗಿ ಕಾಣುತ್ತಿದೆ. ಚಿತ್ರದ ಬಗ್ಗೆ ಉತ್ತಮ ಮಾತು ಹರಡುತ್ತಿರುವುದರೊಂದಿಗೆ, ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದು ಚಿತ್ರತಂಡಕ್ಕೆ ಹೊಸ ಆತ್ಮವಿಶ್ವಾಸ ನೀಡಿದೆ.
ಇದನ್ನೂ ಓದಿ: ಜನವರಿ 29 ರಿಂದ 17ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
ಶಂಕರಾಚಾರ್ಯರ ಜೀವನ ಚರಿತ್ರೆಗೆ ಜೀವ ತುಂಬಿದ ನಿರೂಪಣೆ: ಆದಿ ಶಂಕರಾಚಾರ್ಯರ ಜೀವನ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡಿರುವ ಈ ಚಿತ್ರ, ಭಾರತೀಯ ಸಂಸ್ಕೃತಿ, ಅದ್ವೈತ ತತ್ತ್ವ, ವೇದಾಂತ ಮತ್ತು ಉಪನಿಷತ್ತಿನ ಸಾರವನ್ನು ಸುಂದರವಾಗಿ ತೆರೆ ಮೇಲೆ ಮೂಡಿಸಿದೆ. ನಿರ್ದೇಶಕ ರಾಜಾ ರವಿಶಂಕರ್ ಅವರು ವಿಷಯದ ಗಂಭೀರತೆಯನ್ನು ಕಳೆದುಕೊಳ್ಳದೆ, ಸಾಮಾನ್ಯ ಪ್ರೇಕ್ಷಕರಿಗೂ ಅರ್ಥವಾಗುವ ರೀತಿಯಲ್ಲಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ತತ್ತ್ವಚಿಂತನೆ ಮತ್ತು ಭಾವನಾತ್ಮಕ ದೃಶ್ಯಗಳ ಸಮತೋಲನ ಚಿತ್ರಕ್ಕೆ ಮತ್ತಷ್ಟು ಬಲ ನೀಡಿದೆ.
ನಿರ್ಮಾಣ ಮತ್ತು ಕಲಾವಿದರ ಬಳಗ: ಎಮ್ಮನೂರು ಕ್ರಿಯೇಷನ್ಸ್ ಬ್ಯಾನರ್‌ನಡಿ ವೈ.ಎನ್. ಶರ್ಮ ಮತ್ತು ವಿಜಯಲಕ್ಷ್ಮಿ ಅವರು ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರವೀಂದ್ರ ಭಾಗವತ್, ರಾಮಕೃಷ್ಣ, ರಮೇಶ್ ಭಟ್, ಸಾಯಿ ಪ್ರಕಾಶ್, ಮೈಕೋ ಮಂಜು, ವಿನಯಾ ಪ್ರಸಾದ್, ಡಾ. ಸತ್ಯಮೂರ್ತಿ ಸೇರಿದಂತೆ ಅನೇಕ ಅನುಭವಿ ಕಲಾವಿದರು ಅಭಿನಯಿಸಿದ್ದು, ಪ್ರತಿಯೊಬ್ಬರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಇದನ್ನೂ ಓದಿ: OTTಗೆ ಲಗ್ಗೆಯಿಟ್ಟ ‘ಲವ್ ಯೂ ಮುದ್ದು’ – ಅಪರೂಪದ ಪ್ರೇಮಕಥೆಗೆ ಡಿಜಿಟಲ್ ವೇದಿಕೆ
ಭಕ್ತಿಪ್ರಧಾನ ಸಿನಿಮಾಗಳಿಗೆ ಪ್ರೇಕ್ಷಕರು ಇನ್ನೂ ಬೆಂಬಲ ನೀಡುತ್ತಾರೆ ಎಂಬುದನ್ನು ದೃಢಪಡಿಸಿರುವ ‘ಆಚಾರ್ಯ ಶ್ರೀಶಂಕರ’, ವಿಷಯಾಧಾರಿತ ಹಾಗೂ ಮೌಲ್ಯಯುತ ಚಿತ್ರಗಳು ಸದಾ ಪ್ರೇಕ್ಷಕರನ್ನು ಸೆಳೆಯುತ್ತವೆ ಎಂಬ ಸಂದೇಶವನ್ನು ಚಂದನವನಕ್ಕೆ ನೀಡಿದೆ.























