ಬೆಂಗಳೂರು: ‘ಸು ಫ್ರಂ ಸೋ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ ರಾಜ್ ಬಿ ಶೆಟ್ಟಿ ಗೆಲುವಿನ ನಗೆಯೊಂದಿಗೆ ಹೊಸ ಚಿತ್ರಗಳತ್ತ ಮುನ್ನಡೆಯುತ್ತಿದ್ದಾರೆ. 45 ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ, ಜನವರಿಯಲ್ಲಿ ಬಿಡುಗಡೆಯಾಗಲಿರುವ ‘ಲ್ಯಾಂಡ್ ಲಾರ್ಡ್’ ಚಿತ್ರದ ಸಿದ್ಧತೆಯಲ್ಲಿದ್ದು, ಅದರ ಬೆನ್ನಲ್ಲೇ ಅವರ ಮತ್ತೊಂದು ಹೊಸ ಸಿನಿಮಾ ‘ರಕ್ಕಸಪುರದೋಳ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಕಳೆದ ಒಂದು ದಶಕದಿಂದ ನಿರ್ದೇಶಕ ಜೋಗಿ ಪ್ರೇಮ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ರವಿ ಸಾರಂಗ, ‘ರಕ್ಕಸಪುರದೋಳ್’ ಚಿತ್ರದ ಮೂಲಕ ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರತಂಡವು ಡಿಸೆಂಬರ್ 29ರಂದು ಚಿತ್ರದ ಟೀಸರ್ ಬಿಡುಗಡೆ ಮಾಡುವ ಯೋಜನೆ ರೂಪಿಸಿಕೊಂಡಿದೆ.
ಇದನ್ನೂ ಓದಿ: ಜನವರಿ 29 ರಿಂದ 17ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
ಕ್ರೈಂ–ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರಕ್ಕಸಪುರದೋಳ್’ ಚಿತ್ರವು ಕೊಳ್ಳೇಗಾಲದ ಸುತ್ತಮುತ್ತ ನಡೆಯುವ ಘಟನೆಗಳನ್ನಾಧರಿಸಿದೆ ಎಂಬುದು ಪ್ರಾಥಮಿಕ ಮಾಹಿತಿ. ಚಿತ್ರದ ಕಥೆಯ ಕುರಿತು ಮಾತನಾಡಿದ ನಿರ್ದೇಶಕ ರವಿ ಸಾರಂಗ, ಇದು ಎಲ್ಲರೊಳಗಿರುವ ರಾಕ್ಷಸರ ಕುರಿತಾದ ಕಥೆ. ಮನುಷ್ಯನಲ್ಲಿ ಎರಡು ಗುಣಗಳಿರುತ್ತವೆ – ಒಳ್ಳೆಯದು ಮತ್ತು ಕೆಟ್ಟದ್ದು. ಆ ಕೆಟ್ಟ ಗುಣಗಳನ್ನೇ ‘ರಕ್ಕಸ’ ಎಂದು ಹೇಳಬಹುದು. ಆ ರಕ್ಕಸನನ್ನು ನಾಯಕ ಹೇಗೆ ಮೀರುತ್ತಾನೆ ಎಂಬುದೇ ಚಿತ್ರದ ಕೇಂದ್ರಬಿಂದು ಎಂದು ವಿವರಿಸಿದ್ದಾರೆ.
ಈ ಚಿತ್ರಕ್ಕೆ ಸಾಹಸ ನಿರ್ದೇಶಕ ಕೆ. ರವಿವರ್ಮ ಬಂಡವಾಳ ಹೂಡಿದ್ದಾರೆ. ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ಸ್ವಾತಿಷ್ಟ ಕೃಷ್ಣ ಹಾಗೂ ಅರ್ಚನಾ ಕೊಟ್ಟಿಗೆ ನಟಿಸುತ್ತಿದ್ದಾರೆ. ಜೊತೆಗೆ ಬಿ. ಸುರೇಶ್, ಅನಿರುದ್ಧ ಭಟ್, ಗೋಪಾಲ್ ದೇಶಪಾಂಡೆ, ಜಹಾಂಗೀರ್, ಗೌರವ್ ಶೆಟ್ಟಿ ಮತ್ತು ಸಿದ್ದಣ್ಣ ಸೇರಿದಂತೆ ಬಲಿಷ್ಠ ತಾರಾಗಣ ಚಿತ್ರದಲ್ಲಿದೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಹಾಗೂ ಕ್ರಾಂತಿ ಕುಮಾರ್ ಸಂಭಾಷಣೆ ನೀಡಿದ್ದಾರೆ.
ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದ ರಾಜ್ ಬಿ ಶೆಟ್ಟಿ, “ಈ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅವನು ತನ್ನೊಳಗಿನ ರಾಕ್ಷಸನನ್ನು ಎದುರಿಸಿದಾಗ ಏನಾಗುತ್ತದೆ ಎಂಬುದೇ ಕಥೆ. ಇದು ಬಹಳ ನೈಜವಾದ ಪಾತ್ರ. ನನ್ನ ಪಾತ್ರಕ್ಕೆ ತನ್ನದೇ ಆದ ಜರ್ನಿ, ಹುಡುಕಾಟ, ನೋವು ಮತ್ತು ಸುಖಗಳಿವೆ. ಚಿತ್ರದಲ್ಲಿ ನೋಡುವವರನ್ನು ಹಿಡಿದುಕೊಂಡು ಹೋಗುವ ಗುಣಗಳಿವೆ. ಅದಕ್ಕಾಗಿಯೇ ಈ ಚಿತ್ರವನ್ನು ಒಪ್ಪಿಕೊಂಡೆ” ಎಂದು ಹೇಳಿದ್ದಾರೆ.
‘ರಕ್ಕಸಪುರದೋಳ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಕುತೂಹಲ ಮೂಡಿಸಿದ್ದು, ಕ್ರೈಂ–ಥ್ರಿಲ್ಲರ್ ಪ್ರಿಯ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.























