IND-W vs SL-W: ಭಾರತಕ್ಕೆ ಹ್ಯಾಟ್ರಿಕ್‌ ಗೆಲುವು, ಕೈ ಸೇರಿದ ಟಿ20 ಸರಣಿ

0
1

ತಿರುವನಂತಪುರಂ: ವಿಶಾಖಪಟ್ಟಣದಲ್ಲಿ ಸತತ 2 ಪಂದ್ಯಗಳನ್ನು ಸೋಲುಂಡು ಸರಣಿಯಲ್ಲಿ ಆತಂಕಕ್ಕೆ ಸಿಲುಕಿದ್ದ ಚಮರಿ ಅಟಪಟ್ಟು ಮುಂದಾಳತ್ವದ ಮಹಿಳಾ ಶ್ರೀಲಂಕಾ ತಂಡ, ತಿರುವನಂತಪುರಂನಲ್ಲೂ ನಡೆದ ಸರಣಿ 3ನೇ ಪಂದ್ಯವನ್ನೂ ಸೋಲುವ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು ಇನ್ನು ಎರಡು ಪಂದ್ಯಗಳು ಬಾಕಿಯಿರುವಂತೆಯೇ ಕೈ ಚೆಲ್ಲಿಕೊಂಡಿದೆ.

ಮೊದಲ ಎರಡು ಪಂದ್ಯಗಳಂತೆ ಮೂರನೇ ಪಂದ್ಯವೂ ಸಾಗಿದ್ದು ಕಾಕತಾಳೀಯ ಎನ್ನಿಸಿಕೊಂಡಿತು. ಮೊದಲೆರಡು ಪಂದ್ಯಗಳಂತೆ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದುಕೊಂಡಿತು. ಅಷ್ಟೇ ಅಲ್ಲದೇ, ಮೊದಲೆರಡು ಪಂದ್ಯಗಳಲ್ಲಿ 120+ ರನ್‌ಮೊತ್ತ ದಾಖಲಿಸಿದ್ದ ಶ್ರೀಲಂಕಾ, 3ನೇ ಟಿ20ಯಲ್ಲಿ ಕೇವಲ 112 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಅಂತ್ಯಗೊಳಿಸಿತು. ಆರಂಭಿಕ ಆಟಗಾರ್ತಿ ಹಾಸಿನಿ ಪೆರೆರಾ 25 ರನ್ ಗಳಿಸಿದರಾದರೂ, ಮೇಲ್ಪಂಕ್ತಿಯ ಬ್ಯಾಟರ್‌ಗಳಲ್ಲಿ ನಾಯಕಿ ಚಮರಿ ಅಟಪಟ್ಟು 3 ರನ್‌ಗಳಿಸಿ ನಿರಾಸೆ ಪಡಿಸಿದರು.

ಹರ್ಷಿತಾ ಸಮರವಿಕ್ರಮ ಕೂಡ 2 ರನ್‌ಗಳಿಸಿ ವಾಪಸ್ ತೆರಳಿದರು. ಇಮೇಶಾ ದುಲಾನಿ 27 ರನ್‌ಗಳನ್ನು ಗಳಿಸಿ ತಂಡಕ್ಕೆ ಕೊಂಚ ಆಸರೆಯಾದರು. ಕವಿಶಾ ದಿಲ್ಹಾರಿ 20 ರನ್‌ಗಳಿಸಿ ಗರಿಷ್ಠ ರನ್ ಗಳಿಸಿದ ಕೊನೆ ಆಟಗಾರ್ತಿಯಾದರು. ಕೌಶಿನಿ ನುತ್ಯಂಗನಾ ಅಜೇಯ 19 ರನ್‌ಗಳಿಸಿದ್ದರಿಂದ, ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 112 ರನ್‌ಗಳಿಸಿತು. ಭಾರತದ ಪರ ರೇಣುಕಾ ಸಿಂಗ್ 21 ರನ್‌ಗಳನ್ನು ನೀಡಿ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 18 ರನ್‌ಗಳಿಗೆ 3 ವಿಕೆಟ್ ಪಡೆದುಕೊಂಡರು.

ರನ್‌ಗಾಗಿ ಹಸಿದ ಹೆಬ್ಬುಲಿಯಂತೆ ಬ್ಯಾಟಿಂಗ್ ನಡೆಸುತ್ತಿರುವ ಆರಂಭಿಕ ಆಟಗಾರ್ತಿ ಭಾರತದ ಶಫಾಲಿ ವರ್ಮಾ ಬ್ಯಾಟಿಂಗ್‌ನಲ್ಲಿ ಶ್ರೀಲಂಕಾದ ಬೌಲರ್‌ಗಳ ರಣತಂತ್ರಗಳನ್ನು ಬುಡಮೇಲು ಮಾಡಿದರು. ಸ್ಮೃತಿ ಮಂಧಾನ, ಮೊದಲೆರಡು ಪಂದ್ಯ ಗಳಿಗಿಂತ ಕಳಪೆ ಬ್ಯಾಟಿಂಗ್ ಮಾಡಿ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಪ್ರಮುಖ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಕೂಡ 9 ರನ್‌ನ್ನಷ್ಟೇ ಗಳಿಸಿದರು.

ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ 24 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಮತ್ತೆ ಜೊತೆಯಾದ ಹರ್ಮಾನ್‌ಪ್ರೀತ್ , ತಂಡವನ್ನು ನೂರರ ಗಡಿ ದಾಟಿಸಿದರು. ಶಫಾಲಿ ವರ್ಮಾ 11 ಬೌಂಡರಿ 3 ಸಿಕ್ಸರ್‌ಗಳ ಸಮೇತ 79 ರನ್‌ಗಳಿಸಿದರು. ಇದರಿಂದ, ಭಾರತ 8 ವಿಕೆಟ್‌ಗಳ ಜಯ ಸಂಪಾದಿಸಿತು.

ದೀಪ್ತಿ 150ನೇ ವಿಕೆಟ್: ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತದ ಆಟಗಾರ್ತಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀಪ್ತಿ 151 ವಿಕೆಟ್‌ಗಳನ್ನು ಗಳಿಸುವ ಮೂಲಕ ಮೇಗನ್ ಶುಟ್ ಅವರ ಜೊತೆ ಸೇರಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಂಟಿ ಸ್ಥಾನ ಪಡೆದುಕೊಂಡಿದ್ದಾರೆ. 131 ಪಂದ್ಯಗಳಲ್ಲಿ ದೀಪ್ತಿ ಶರ್ಮಾ ಈ ಸಾಧನೆ ಮಾಡಿದ್ದು, ಮಹಿಳಾ ಅಂ.ರಾ. ಕ್ರಿಕೆಟ್‌ನಲ್ಲಿ 333 ವಿಕೆಟ್ ಪಡೆದು ವಿಶ್ವದ 3ನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎನಿಸಿದ್ದಾರೆ.

Previous articleಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ