ದಾವಣಗೆರೆ: ದೇಶದ ಶ್ರೇಷ್ಠ ಹಿರಿಯ ಶಾಸಕರಾಗಿದ್ದ ಹಾಗೂ ಪಕ್ಷಾತೀತ ನಿಲುವಿನ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದರು.
“ಶಾಮನೂರು ಶಿವಶಂಕರಪ್ಪ ಅವರನ್ನು ಕಳೆದುಕೊಂಡಿದ್ದು ನನ್ನ ಹಿರಿಯಣ್ಣನನ್ನೇ ಕಳೆದುಕೊಂಡಂತಾಗಿದೆ” ಎಂದು ಅವರು ಭಾವುಕರಾಗಿ ನುಡಿದರು.
ಇದನ್ನೂ ಓದಿ: Train Fare: ಇಂದಿನಿಂದ ರೈಲು ಪ್ರಯಾಣ ದರ ಏರಿಕೆ
ನಗರದ ಕಲ್ಲೇಶ್ವರ ಮಿಲ್ ಹಿಂಭಾಗದಲ್ಲಿ ಆಯೋಜಿಸಲಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಕೈಲಾಸ ಶಿವಣಾರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ, ಶಾಮನೂರು ಅವರು ತಮ್ಮ ರಾಜಕೀಯ ಬದುಕಿನಲ್ಲಿ ಕಂಡ ಅಪರೂಪದ ನಾಯಕರಲ್ಲಿ ಒಬ್ಬರು ಎಂದು ಶ್ಲಾಘಿಸಿದರು.
“ಶಾಮನೂರು ಶಿವಶಂಕರಪ್ಪ ಅವರು ಉದ್ಯಮಿ ಮತ್ತು ರಾಜಕಾರಣಿ—ಎರಡೂ ಕ್ಷೇತ್ರಗಳಲ್ಲಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ದಾವಣಗೆರೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ, ನಗರವನ್ನು ವಿದ್ಯಾಕಾಶಿಯಾಗಿ ರೂಪಿಸಿದ ಮಹತ್ವ ಅವರಿಗೆ ಸಲ್ಲುತ್ತದೆ” ಎಂದು ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ: ರೈಲ್ವೆ ದರ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲೆ ಹೊರೆ ಹಾಕಿದೆ
ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿಯೂ ಸಮಾಜಕ್ಕೆ ಮಹತ್ವದ ಸೇವೆ ಸಲ್ಲಿಸಿದ್ದಾರೆಂದು ಸ್ಮರಿಸಿದರು.
“ಲಿಂಗಾಯತ ಹಾಗೂ ವೀರಶೈವ ಒಂದೇ ಎಂಬ ದೃಢ ನಿಲುವನ್ನು ಅವರು ಸದಾ ಹೊಂದಿದ್ದರು. ಸಮಾಜದಲ್ಲಿ ಬಿರುಕು ಮೂಡುವಂತಹ ಸಂವೇದನಶೀಲ ಸಂದರ್ಭಗಳಲ್ಲೂ ಎಲ್ಲರನ್ನು ಒಂದಾಗಿಸಿ ಕೊಂಡೊಯ್ದ ನಾಯಕ ಶಾಮನೂರು ಶಿವಶಂಕರಪ್ಪ” ಎಂದು ಯಡಿಯೂರಪ್ಪ ಕೊಂಡಾಡಿದರು.
ಪಕ್ಷಾತೀತ ನಿಲುವು, ಸಾಮಾಜಿಕ ಸಾಮರಸ್ಯ, ಶಿಕ್ಷಣ ಕ್ಷೇತ್ರದ ಬೆಳವಣಿಗೆ—ಈ ಎಲ್ಲ ಅಂಶಗಳಲ್ಲಿ ಶಾಮನೂರು ಶಿವಶಂಕರಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.






















