ಬಳ್ಳಾರಿ ಜೀನ್ಸ್ ಪಾರ್ಕ್: ಕೈಗಾರಿಕಾ ನಿವೇಶನಗಳ ದರ ಅರ್ಧದಷ್ಟು ಇಳಿಕೆ

0
6

ಬಳ್ಳಾರಿ ಜೀನ್ಸ್ ಪಾರ್ಕ್‌ನಲ್ಲಿ ಭಾರೀ ದರ ಇಳಿಕೆ: ಉತ್ತರ ಕರ್ನಾಟಕಕ್ಕೆ ಹೂಡಿಕೆ ಹರಿವಿಗೆ ಹೊಸ ದಾರಿ

ಬೆಂಗಳೂರು: ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಮಹತ್ವದ ಉತ್ತೇಜನ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ಬಳ್ಳಾರಿ ಜೀನ್ಸ್ ಪಾರ್ಕ್‌ನಲ್ಲಿ ಕೈಗಾರಿಕಾ ನಿವೇಶನಗಳ ದರವನ್ನು ಎಕರೆಗೆ ₹1.35 ಕೋಟಿಯಿಂದ ₹67.50 ಲಕ್ಷಕ್ಕೆ ಇಳಿಸಲಾಗಿದೆ. ಈ ಮೂಲಕ ಬಳ್ಳಾರಿಯನ್ನು ಜವಳಿ ಉದ್ಯಮದ ಭವಿಷ್ಯದ ಪ್ರಮುಖ ಹಬ್ ಆಗಿ ರೂಪಿಸುವತ್ತ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವರು, “ನುಡಿದಂತೆ ನಡೆಯುತ್ತಿರುವ ನಮ್ಮ ಸರ್ಕಾರ ಬಳ್ಳಾರಿಯನ್ನು ಜವಳಿ ಉದ್ಯಮದ ಕೇಂದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ಸ್ಪಷ್ಟ ಕಾರ್ಯತಂತ್ರವನ್ನು ಅನುಸರಿಸುತ್ತಿದೆ. ಕೈಗಾರಿಕಾ ನಿವೇಶನಗಳ ದರ ಇಳಿಕೆಯೊಂದಿಗೆ ಮೂಲಸೌಕರ್ಯ ಮತ್ತು ಸೌಲಭ್ಯಗಳ ವಿಸ್ತರಣೆಯನ್ನೂ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ರೈತರು ಬೆಳೆದ ಬೆಳೆಗಳಿಂದ ಸಚಿವ ಎಂ.ಬಿ. ಪಾಟೀಲರಿಗೆ ತುಲಾಭಾರ

ಸಣ್ಣ–ಮಧ್ಯಮ ಉದ್ಯಮಿಗಳಿಗೆ ಹೊಸ ಅವಕಾಶ: ದರ ಇಳಿಕೆಯ ಪರಿಣಾಮವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಬಳ್ಳಾರಿ ಜೀನ್ಸ್ ಪಾರ್ಕ್‌ನಲ್ಲಿ ಹೂಡಿಕೆ ಮಾಡಲು ಸುಲಭವಾಗಿದ್ದು, ಇದರಿಂದ ಜವಳಿ ಕ್ಷೇತ್ರದಲ್ಲಿ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಜೀನ್ಸ್, ಗಾರ್ಮೆಂಟ್ಸ್, ಟೆಕ್ಸ್ಟೈಲ್ ಪ್ರೊಸೆಸಿಂಗ್ ಸೇರಿದಂತೆ ಪೂರಕ ವಲಯಗಳ ಬೆಳವಣಿಗೆಗೂ ಇದು ದಾರಿ ಮಾಡಿಕೊಡಲಿದೆ.

ಉದ್ಯೋಗ ಸೃಷ್ಟಿಗೆ ಬಲ: ಈ ಯೋಜನೆಯಿಂದ ನೇರ ಹಾಗೂ ಪರೋಕ್ಷವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ಉತ್ತರ ಕರ್ನಾಟಕದ ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ಬರಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ತಿಂಗಳ ಕಂತು ಈ ವಾರ ರಿಲೀಸ್

ಉತ್ತರ ಕರ್ನಾಟಕದ ಆರ್ಥಿಕ ಸಬಲೀಕರಣ: ಬಳ್ಳಾರಿ ಜೀನ್ಸ್ ಪಾರ್ಕ್ ಉತ್ತರ ಕರ್ನಾಟಕದ ಆರ್ಥಿಕ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಲಿದೆ. ಕೈಗಾರಿಕಾ ಹೂಡಿಕೆಗಳ ಮೂಲಕ ಪ್ರದೇಶದ ಆದಾಯ, ಉದ್ಯೋಗ ಮತ್ತು ಕೈಗಾರಿಕಾ ವಾತಾವರಣವನ್ನು ಬಲಪಡಿಸುವ ಉದ್ದೇಶ ಸರ್ಕಾರದಾಗಿದೆ ಎಂದು ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.

Previous articleಶಿಕ್ಷಣ ಕ್ಷೇತ್ರದ ದಿಗ್ಗಜ ಪ್ರೊ. ಎಸ್. ಪ್ರಭಾಕರ್ ಇನ್ನಿಲ್ಲ
Next articleಮುಖ್ಯಮಂತ್ರಿ ಬದಲಾಯಿಸಿದರೆ ಕಾಂಗ್ರೆಸ್‌ಗೆ ತಕ್ಕಪಾಠ