ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ, ಅವಾಚ್ಯ ಹಾಗೂ ದ್ವೇಷಪೂರ್ಣ ಕಮೆಂಟ್‌ಗಳನ್ನು ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ವಿಶೇಷವಾಗಿ ಸೆಲೆಬ್ರಿಟಿಗಳು ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಇತ್ತೀಚೆಗೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಕೂಡ ಇದೇ ಸಮಸ್ಯೆಯನ್ನು ಎದುರಿಸಿದ್ದು, ಈ ಸಂಬಂಧ ಅವರು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ವಿಜಯಲಕ್ಷ್ಮೀ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಬಂದ ಹೇಟ್ ಕಮೆಂಟ್‌ಗಳು ಹಾಗೂ ಅವಾಚ್ಯ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸೈಬರ್ ಅಪರಾಧ ವಿಭಾಗಕ್ಕೆ ಸಲ್ಲಿಸಿದ್ದು, ಸಂಬಂಧಪಟ್ಟ ಖಾತೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಕಮೆಂಟ್‌ಗಳು ಮಾನಸಿಕ ಕಿರುಕುಳ ಉಂಟುಮಾಡುವ ರೀತಿಯಲ್ಲಿದ್ದು, ಮಿತಿಮೀರಿದ ಅಸಭ್ಯ ಭಾಷೆ ಬಳಸಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: VIJAY HAZARE TROPHY: ವಿರಾಟ್ ಕೊಹ್ಲಿ ಐತಿಹಾಸಿಕ ಸಾಧನೆ
ಸೈಬರ್ ಪೊಲೀಸ್ ಭರವಸೆ: ವಿಜಯಲಕ್ಷ್ಮೀ ಸಲ್ಲಿಸಿದ ದೂರನ್ನು ಸೈಬರ್ ಕ್ರೈಂ ವಿಭಾಗದ ಇನ್ಸ್‌ಪೆಕ್ಟರ್ ಸ್ವೀಕರಿಸಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಮೆಂಟ್ ಮಾಡಿದ ಖಾತೆಗಳ ಮೂಲ, ಯಾರು ಈ ಅಶ್ಲೀಲತೆ ನಡೆಸುತ್ತಿದ್ದಾರೆ ಎಂಬುದನ್ನು ತಂತ್ರಜ್ಞಾನ ಮೂಲಕ ಪತ್ತೆಹಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖ್ಯಾತ ನಟರ ಅಭಿಮಾನಿಗಳ ಹೆಸರಿನಲ್ಲಿ ಅಶ್ಲೀಲತೆ?: ವಿಜಯಲಕ್ಷ್ಮೀ ಖಾತೆಗೆ ಬಂದ ಅನೇಕ ಕಮೆಂಟ್‌ಗಳು ಮತ್ತು ಮೆಸೇಜ್‌ಗಳು ಖ್ಯಾತ ನಟರ ಅಭಿಮಾನಿಗಳ ಖಾತೆಗಳೆಂಬ ಅನುಮಾನಕ್ಕೆ ಕಾರಣವಾಗಿವೆ. ಕೆಲವರು ನಟರ ಅಭಿಮಾನಿಗಳ ಹೆಸರಿನಲ್ಲಿ ಖಾತೆ ತೆರೆದು ಕಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ನಟರ ಹೆಸರು ಅಥವಾ ಸ್ಟಿಕ್ಕರ್‌ಗಳನ್ನು ಬಳಸಿ ನಿಂದನೀಯ ಸಂದೇಶಗಳನ್ನು ಕಳುಹಿಸಿದ್ದಾರೆ.
ಆದರೆ, ಈ ಖಾತೆಗಳ ಹಿಂದೆ ಇರುವವರು ನಿಜಕ್ಕೂ ಆ ನಟರ ಅಭಿಮಾನಿಗಳೇ ಅಥವಾ ಕೇವಲ ಹೆಸರು ದುರುಪಯೋಗ ಮಾಡಿಕೊಂಡಿರುವವರೇ ಎಂಬುದು ತನಿಖೆಯ ನಂತರವೇ ಸ್ಪಷ್ಟವಾಗಲಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿಯ ಆರಂಭ: ನಿಮ್ಮೂರಲ್ಲೇ ಕನಸು ನನಸಾಗಿಸಿಕೊಳ್ಳಿ
ಈ ಹಿಂದೆಯೂ ನಡೆದಿತ್ತು ಇಂತಹ ಪ್ರಕರಣ: ಇದು ಮೊದಲ ಬಾರಿ ಅಲ್ಲ. ಈ ಹಿಂದೆ ನಟಿ ರಮ್ಯಾ ಕೂಡ ಇದೇ ರೀತಿಯ ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್‌ಗಳಿಂದ ಬೇಸತ್ತು ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದರು. ಆ ಪ್ರಕರಣದಲ್ಲಿ ಕೆಲವರನ್ನು ಪೊಲೀಸರು ಅರೆಸ್ಟ್ ಕೂಡ ಮಾಡಿದ್ದರು. ಇದೀಗ ವಿಜಯಲಕ್ಷ್ಮೀ ಪ್ರಕರಣವೂ ಅದೇ ಮಾದರಿಯ ಗಂಭೀರತೆಯನ್ನು ಪಡೆದುಕೊಂಡಿದೆ.
ಸಮಾಜಕ್ಕೆ ಸಂದೇಶ : ಸೋಶಿಯಲ್ ಮೀಡಿಯಾ ಅಭಿವ್ಯಕ್ತಿಯ ಸ್ವಾತಂತ್ರ್ಯದ ವೇದಿಕೆ ಆಗಿದ್ದರೂ, ಅದನ್ನು ಕಿರುಕುಳ, ಅಶ್ಲೀಲತೆ ಮತ್ತು ದ್ವೇಷ ಹರಡುವ ಸಾಧನವಾಗಿ ಬಳಸುವುದು ಅಪರಾಧ ಎಂಬ ಸಂದೇಶವನ್ನು ಈ ಪ್ರಕರಣ ಮತ್ತೊಮ್ಮೆ ನೆನಪಿಸುತ್ತಿದೆ. ಸೆಲೆಬ್ರಿಟಿಗಳಾದರೂ ಸಹ ಸಾಮಾನ್ಯ ನಾಗರಿಕರಂತೆ ಗೌರವ ಮತ್ತು ಭದ್ರತೆ ಅವರಿಗೆ ಅಗತ್ಯ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.























