ವಿಶ್ವವಿಖ್ಯಾತ ಹಂಪಿಯ ಕಳಪೆ ನಿರ್ವಹಣೆಗೆ ಕೇಂದ್ರ ಸಚಿವೆ ಅಸಮಾಧಾನ!

0
1

ಹಂಪಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಐತಿಹಾಸಿಕ ಹಂಪಿಯ ಕಳಪೆ ನಿರ್ವಹಣೆ ಹಾಗೂ ನೈರ್ಮಲ್ಯದ ಕೊರತೆ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹಾಗೂ ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರ ಹಂಪಿಯ ಐತಿಹಾಸಿಕ ಕೋದಂಡರಾಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ, ಮಾರ್ಗ ಮಧ್ಯದಲ್ಲಿ ಮಾನವ ತ್ಯಾಜ್ಯ (ಮಲ), ಕಸಕಡ್ಡಿ ಹಾಗೂ ಅಶುದ್ಧ ಪರಿಸರ ಕಂಡು ಸಚಿವೆ ಗರಂ ಆಗಿದ್ದಾರೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ತಕ್ಕ ಮಟ್ಟದ ಸ್ವಚ್ಛತೆ ಮತ್ತು ನಿರ್ವಹಣೆ ಇಲ್ಲದಿರುವುದಕ್ಕೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಂಪಿಯಂತಹ ಜಾಗತಿಕ ಮಹತ್ವದ ಪಾರಂಪರಿಕ ತಾಣದಲ್ಲಿ ಅಗತ್ಯವಾದ ನೈರ್ಮಲ್ಯ ಸೌಲಭ್ಯಗಳೇ ಇಲ್ಲದಿರುವುದನ್ನು ಗಮನಿಸಿದ ಸಚಿವೆ, ಪ್ರತಿದಿನ ಸಾವಿರಾರು ದೇಶಿ-ವಿದೇಶಿ ಪ್ರವಾಸಿಗರು ಬರುವ ಈ ತಾಣದಲ್ಲಿ ಅವರ ಪರಿಸ್ಥಿತಿ ಇನ್ನೆಷ್ಟು ದುರ್ಬಲವಾಗಿರಬಹುದು?” ಎಂದು ಅವರು ಕಿಡಿಕಾರಿದ್ದಾರೆ ಎನ್ನಲಾಗಿದೆ.

ಹಂಪಿಯ ಅಭಿವೃದ್ಧಿ, ಸ್ವಚ್ಛತೆ ಹಾಗೂ ನಿರ್ವಹಣೆಗೆ ಸಂಬಂಧಿಸಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ASI ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದಕ್ಕೂ ಸಚಿವೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಪಾರಂಪರಿಕ ತಾಣದ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ತೋರಲಾಗುತ್ತಿರುವ ನಿರ್ಲಕ್ಷ್ಯವನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಈ ಭೇಟಿ, ಹಂಪಿಯ ನಿರ್ವಹಣೆ, ನೈರ್ಮಲ್ಯ ಮತ್ತು ಪಾರಂಪರಿಕ ಸಂರಕ್ಷಣೆಯ ಸ್ಥಿತಿಗತಿಗಳ ಕುರಿತು ಸ್ಥಳೀಯ ನಿವಾಸಿಗಳು, ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರು ಹಾಗೂ ಸಾರ್ವಜನಿಕರಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮಕೈಗೊಂಡು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು, ಇಲ್ಲವಾದರೆ ಹಂಪಿಯ ಗೌರವ ಮತ್ತು ವಿಶ್ವ ಪರಂಪರೆಯ ಸ್ಥಾನಕ್ಕೆ ಧಕ್ಕೆಯಾಗಲಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Previous articleಸಿಎಂ,‌ಡಿಸಿಎಂ ಕುರ್ಚಿ ಕಚ್ಚಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತ : ಶೋಭಾ ಕರಂದಾಜ್ಲೆ