ಮೇ 2026ರೊಳಗೆ DPR ಸಿದ್ಧ – ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪತ್ರ
ನವದೆಹಲಿ / ಬಾಗಲಕೋಟೆ: ಉತ್ತರ ಕರ್ನಾಟಕದ ಬಹು ನಿರೀಕ್ಷಿತ ಆಲಮಟ್ಟಿಯಿಂದ ಕುಷ್ಟಗಿವರೆಗೆ ನೂತನ ರೈಲ್ವೆ ಮಾರ್ಗ ನಿರ್ಮಾಣದ ದಿಕ್ಕಿನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ನೂತನ ರೈಲ್ವೆ ಮಾರ್ಗದ ಸರ್ವೆ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, 2026ರ ಮೇ ಅಂತ್ಯದೊಳಗೆ ವಿವರವಾದ ಯೋಜನಾ ವರದಿ (DPR) ತಯಾರಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪತ್ರ ಮುಖೇನ ತಿಳಿಸಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ಹಾಗೂ ಬಾಗಲಕೋಟೆಯ ಸಂಸದ ಪಿ.ಸಿ. ಗದ್ದಿಗೌಡರ್ ಅವರು ನವದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ, ಆಲಮಟ್ಟಿಯಿಂದ ಕುಷ್ಟಗಿವರೆಗೆ ನೂತನ ರೈಲ್ವೆ ಮಾರ್ಗ ಮಂಜೂರಾತಿಗೆ ಆಗ್ರಹಿಸಿದ್ದರು. ಈ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವರು, ಯೋಜನೆಯ ಪ್ರಗತಿ ಕುರಿತು ಅಧಿಕೃತ ಮಾಹಿತಿ ನೀಡಿರುವುದು ಉತ್ತರ ಕರ್ನಾಟಕದ ಜನರಲ್ಲಿ ಆಶಾಭಾವನೆ ಮೂಡಿಸಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ವಿಳಂಬ: ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಷಾದ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಉತ್ತೇಜನ: ಈ ರೈಲ್ವೆ ಮಾರ್ಗವು ಬಾಗಲಕೋಟೆ, ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚಾರ, ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಲಿದೆ. ಕೃಷಿ ಉತ್ಪನ್ನಗಳ ಸಾಗಣೆ, ಕೈಗಾರಿಕಾ ವಸ್ತುಗಳ ರವಾನೆ ಹಾಗೂ ಪ್ರಯಾಣಿಕರ ಸಂಚಾರ ಸುಗಮವಾಗುವ ಮೂಲಕ ಈ ಭಾಗದ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಸಾಮಾಜಿಕ ಜಾಲತಾಣದಲ್ಲಿ ಪತ್ರ ಹಂಚಿಕೊಂಡ ಪ್ರಲ್ಹಾದ ಜೋಶಿ: ಈ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ಸಚಿವರ ಪತ್ರವನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದು ಕರ್ನಾಟಕದಲ್ಲಿ ರೈಲ್ವೆ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸಿ, ವಾಣಿಜ್ಯೋದ್ಯಮದೊಂದಿಗೆ ಸುಲಭ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಅನಂತ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ಸೂಚಿಸುವವರೆಗೂ ನಾನೇ ಮುಖ್ಯಮಂತ್ರಿ
ಉತ್ತರ ಕರ್ನಾಟಕದ ಜನತೆಗೆ ಬಹುಕಾಲದ ಬೇಡಿಕೆಯಾಗಿದ್ದ ಈ ಯೋಜನೆ ಮುಂದಿನ ಹಂತಕ್ಕೆ ಸಾಗುತ್ತಿರುವುದು, ಪ್ರಾದೇಶಿಕ ಸಮತೋಲನ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.























