ವಿಧಾನಸಭೆಯಲ್ಲಿ ಎರಡು ಸ್ಥಾನ ತೆರವು: ಮಾರ್ಚ್‌ – ಏಪ್ರಿಲ್‌ನಲ್ಲಿ ಉಪಚುನಾವಣೆ ಬಹುತೇಕ ಫಿಕ್ಸ್

0
3

ಬೆಂಗಳೂರು: ಹಾಲಿ ಶಾಸಕರಾಗಿದ್ದ ಹೆಚ್.ವೈ ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ರಾಜ್ಯ ವಿಧಾನಸಭೆಯ ಎರಡು ಸ್ಥಾನಗಳು ತೆರವಾಗಿರುವ ಕುರಿತು ಸಚಿವಾಲಯದಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಅಧಿಕೃತ ಮಾಹಿತಿ ರವಾನಿಸಲ್ಪಟ್ಟಿದೆ.

ವಾಸ್ತವವಾಗಿ ವಿಧಾನಸಭೆಯಲ್ಲಿ ಯಾವುದೇ ಕಾರಣದಿಂದ ಶಾಸಕ ಸ್ಥಾನ ತೆರವಾದಲ್ಲಿ ಸಂವಿಧಾನಾತ್ಮಕವಾಗಿ ಮುಂದಿನ ಆರು ತಿಂಗಳಲ್ಲಿ ಚುನಾವಣೆ ನಡೆಯಬೇಕಾಗುತ್ತದೆ. ಹಾಗಾಗಿ 2026ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಸ್ಥಾನ ತೆರವಾಗಿರುವ ಕುರಿತು ವಿಧಾನಸಭಾ ಕಾರ್ಯದರ್ಶಿಯವರಿಂದ ರಾಜ್ಯ ಮುಖ್ಯಚುನಾವಣಾಧಿಕಾರಿಯವರಿಗೆ ಅಧಿಕೃತ ಮಾಹಿತಿ ತಲುಪಬೇಕಾಗುತ್ತದೆ.

ಮಾಜಿ ಸಚಿವರೂ ಆಗಿದ್ದ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ 77 ವರ್ಷದ ಹೆಚ್.ವೈ. ಮೇಟಿ ಅನಾರೋಗ್ಯದ ಕಾರಣದಿಂದ ನವೆಂಬರ್ 4ರಂದು ನಿಧನರಾಗಿದ್ದರು. ಬಳಿಕ ಡಿಸೆಂಬರ್ 14ರಂದು 94 ವರ್ಷದ ಹಿರಿಯ ಶಾಸಕ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ವಯೋಸಹಜ ಆರೋಗ್ಯ ಸಮಸ್ಯೆಯಿಂದ ನಿಧನ ಹೊಂದಿದರು. ಹಾಗಾಗಿ 224 ಬಲದ ಶಾಸನಸಭೆಯಲ್ಲಿ ಇದೀಗ 2 ಸ್ಥಾನಗಳು ತೆರವಾಗಿವೆ.

ರಾಜ್ಯ ಸರ್ಕಾರದಿಂದ ಶಾಸಕ ಸ್ಥಾನಗಳು ತೆರವಾಗಿರುವ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರಿಗೆ ಮಾಹಿತಿ ರೂಪದ ವರದಿ ಹೋಗಿದೆ. ಇದೀಗ ಅಲ್ಲಿಂದ ಕೇಂದ್ರ ಚುನಾವಣಾ ಅಯೋಗಕ್ಕೆ ಇನ್ನೆರಡು ದಿನಗಳಲ್ಲಿ ವರದಿ ರವಾನೆಯಾಗಲಿದೆ. ಆ ಬಳಿಕ ಉಪಚುನಾವಣೆ ಕುರಿತು ಪ್ರಕಿಯೆಗೆ ಆಯೋಗ ನಿರ್ಧರಿಸಲಿದೆ. ಮೂಲಗಳ ಮಾಹಿತಿ ಪ್ರಕಾರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಚುನಾವಣೆಗೆ ಮುಹೂರ್ತ ನಿಗದಿಯಾಗುವ ನಿರೀಕ್ಷೆ ಇದೆ.

Previous articleಬಿಜೆಪಿ ದ್ವೇಷ ರಾಜಕಾರಣ ನ್ಯಾಯದ ಮುಂದೆ ಸೋಲು ಕಂಡಿದೆ