ಅಹಮದಾಬಾದ್: ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಗುಜರಾತ್ ರಾಜ್ಯದ ಶಿಕ್ಷಣ ಸಚಿವೆ ರಿವಾಬಾ ಜಡೇಜಾ ಅವರು ನೀಡಿರುವ ಹೇಳಿಕೆಯೊಂದು ಇದೀಗ ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಕೆಲವು ಕ್ರಿಕೆಟಿಗರು ದುಶ್ಚಟಗಳಲ್ಲಿ ತೊಡಗುತ್ತಾರೆ ಎಂಬ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಗುಜರಾತಿ ಭಾಷೆಯ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿವಾಬಾ ಜಡೇಜಾ, ಕ್ರಿಕೆಟಿಗರ ವೈಯಕ್ತಿಕ ನಡವಳಿಕೆಯನ್ನು ಉಲ್ಲೇಖಿಸಿ, ಕ್ರಿಕೆಟಿಗರು ಸಾರ್ವಜನಿಕ ದೃಷ್ಟಿಯಿಂದ ದೂರ ಇರುವಾಗ ತಮ್ಮ ಇಚ್ಛೆಯಂತೆ ನಡೆದುಕೊಳ್ಳುತ್ತಾರೆ. ವಿದೇಶ ಪ್ರವಾಸಗಳಲ್ಲಿ ಕೆಲವರು ಕೆಟ್ಟ ಪ್ರವೃತ್ತಿಗಳಲ್ಲಿ ತೊಡಗುತ್ತಾರೆ. ಆದರೆ ನನ್ನ ಪತಿ ರವೀಂದ್ರ ಜಡೇಜಾ ಅವರು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ಅರಿತಿರುವ ವ್ಯಕ್ತಿ. ಸುತ್ತಮುತ್ತಲಿನ ವಾತಾವರಣ ಹೇಗೇ ಇದ್ದರೂ ಅವರು ಎಂದಿಗೂ ದುಶ್ಚಟಗಳತ್ತ ಮುಖಮಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೂರು ದಿನಗಳ GOAT ಇಂಡಿಯಾ ಟೂರ್‌ಗೆ ಮೆಸ್ಸಿ ಆಗಮನ
ಲಂಡನ್, ದುಬೈ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಿಗೆ ಕ್ರಿಕೆಟ್ ಪಂದ್ಯಗಳಿಗಾಗಿ ಜಡೇಜಾ ಆಗಾಗ್ಗೆ ಪ್ರವಾಸ ಕೈಗೊಳ್ಳುತ್ತಾರೆ ಎಂಬುದನ್ನು ಉಲ್ಲೇಖಿಸಿದ ಅವರು, ಇತರ ಕೆಲ ಆಟಗಾರರು ಇಂತಹ ದುಶ್ಚಟಗಳಲ್ಲಿ ತೊಡಗಿದರೂ ಅವರ ಕುಟುಂಬಗಳಿಂದ ಯಾವುದೇ ನಿರ್ಬಂಧವಿರುವುದಿಲ್ಲ. ಆದರೆ ನನ್ನ ಪತಿ ಯಾವ ಸಂದರ್ಭದಲ್ಲೂ ತಪ್ಪು ನಡವಳಿಕೆ ತೋರಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಈ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿವಿಧ ಕ್ರಿಕೆಟಿಗರ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ರಿವಾಬಾ ಜಡೇಜಾ ಅವರ ಹೇಳಿಕೆ ಕ್ರಿಕೆಟ್ ಹಾಗೂ ರಾಜಕೀಯ ವಲಯಗಳಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ಹೊರಬರುವ ಸಾಧ್ಯತೆ ಇದೆ.
ಇದನ್ನೂ ಓದಿ: 2027ರ ದೇಶವ್ಯಾಪಿ ಡಿಜಿಟಲ್ ಜನಗಣತಿಗೆ ಕೇಂದ್ರ ಮಂಜೂರು





















