ಕೋಲ್ಕತ್ತಾದಲ್ಲಿ 71 ಅಡಿ ಎತ್ತರದ ಪ್ರತಿಮೆ ಅನಾವರಣ, ನಾಲ್ಕು ಮಹಾನಗರಗಳಿಗೆ ಭೇಟಿ
ಕೋಲ್ಕತ್ತಾ : ಅರ್ಜೆಂಟೀನಾದ ದಿಗ್ಗಜ ಫುಟ್ಬಾಲರ್, ಎಂಟು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ಹಾಗೂ ಸರ್ವಕಾಲಿಕ ಶ್ರೇಷ್ಠ ಆಟಗಾರನೆಂದು ಖ್ಯಾತರಾದ ಲಿಯೋನಲ್ ಮೆಸ್ಸಿ ಅವರು ಮೂರು ದಿನಗಳ GOAT ಇಂಡಿಯಾ ಟೂರ್ 2025 ಕಾರ್ಯಕ್ರಮದ ಅಂಗವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಶನಿವಾರ ಮುಂಜಾನೆ ಭಾರತಕ್ಕೆ ಬಂದಿಳಿದ ಮೆಸ್ಸಿ, ತಮ್ಮ ತಂಡದ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರೊಂದಿಗೆ ದೇಶದ ಪ್ರಮುಖ ನಾಲ್ಕು ನಗರಗಳಾದ ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ದೆಹಲಿಗಳಿಗೆ ಭೇಟಿ ನೀಡಲಿದ್ದಾರೆ.
ಮೆಸ್ಸಿ ಭಾರತ ಪ್ರವಾಸದ ಪ್ರಮುಖ ಆಕರ್ಷಣೆಯಾಗಿ, ಶನಿವಾರ ಕೋಲ್ಕತ್ತಾದಲ್ಲಿ ತಮ್ಮದೇ 71 ಅಡಿ ಎತ್ತರದ ಭವ್ಯ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಈ ಪ್ರತಿಮೆಯನ್ನು 45 ಜನ ಸಿಬ್ಬಂದಿ ಒಳಗೊಂಡ ತಂಡವು 27 ದಿನಗಳ ಕಾಲ ಶ್ರಮಿಸಿ ನಿರ್ಮಿಸಿದ್ದು, ಸುಮಾರು 70–71 ಅಡಿ ಎತ್ತರ ಹೊಂದಿದೆ. ಫುಟ್ಬಾಲ್ ಲೋಕದ ದಂತಕಥೆಗೆ ಗೌರವ ಸೂಚಿಸುವ ಸಲುವಾಗಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಈ ಪ್ರವಾಸದಲ್ಲಿ ಪೂರ್ಣ ಪ್ರಮಾಣದ ಫುಟ್ಬಾಲ್ ಪಂದ್ಯಗಳು ನಡೆಯುವುದಿಲ್ಲ. ಬದಲಾಗಿ ಅಭಿಮಾನಿಗಳೊಂದಿಗೆ ಸಂವಾದ ಕಾರ್ಯಕ್ರಮಗಳು. ಮಕ್ಕಳಿಗೆ ಫುಟ್ಬಾಲ್ ಕೌಶಲ್ಯ ತರಬೇತಿ ಅವಧಿಗಳು. ಸಾಂಸ್ಕೃತಿಕ ಕಾರ್ಯಕ್ರಮಗಳು. ಪ್ರದರ್ಶನ ಆಟಗಳು. ಐತಿಹಾಸಿಕ ಎಂಎಲ್‌ಎಸ್ ಕಪ್‌ಗೆ ಮೆಸ್ಸಿ ಚಾಲನೆ ಹೀಗೆ ಹಲವು ವಿಶೇಷ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: 2027ರ ದೇಶವ್ಯಾಪಿ ಡಿಜಿಟಲ್ ಜನಗಣತಿಗೆ ಕೇಂದ್ರ ಮಂಜೂರು
2011ರ ಬಳಿಕ ಮೆಸ್ಸಿ ಭಾರತಕ್ಕೆ ಆಗಮಿಸುತ್ತಿರುವುದು ಇದೇ ಮೊದಲು ಎಂಬುದು ಈ ಪ್ರವಾಸದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. 2011ರಲ್ಲಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 1–0 ಗೋಲುಗಳಿಂದ ಜಯಗಳಿಸಿತ್ತು. ಆ ಪಂದ್ಯವನ್ನು ವೀಕ್ಷಿಸಲು 1 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಸೇರಿದ್ದರು. ಆ ಐತಿಹಾಸಿಕ ಕ್ಷಣವನ್ನು ಸ್ಮರಿಸುವ ಸಲುವಾಗಿ ಕೋಲ್ಕತ್ತಾ ನಗರದಲ್ಲಿ ಮೆಸ್ಸಿಯ ಬೃಹತ್ ಪ್ರತಿಮೆ ನಿರ್ಮಿಸುವ ಯೋಜನೆಯನ್ನು ನಗರ ಆಡಳಿತ ಕೈಗೊಂಡಿದೆ.
ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಇದು ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣವಾಗಿದ್ದು, ಮೆಸ್ಸಿಯ ಆಗಮನದಿಂದ ದೇಶಾದ್ಯಂತ ಫುಟ್ಬಾಲ್ ಜ್ವರ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೆಸ್ಸಿ ಭಾರತ ಪ್ರವಾಸದ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ದೇಶ ವಿಭಜನೆ ಬಳಿಕ ಪಾಕಿಸ್ತಾನದಲ್ಲಿ ಸಂಸ್ಕೃತ ಕಲಿಕೆಗೆ ಐತಿಹಾಸಿಕ ಹೆಜ್ಜೆ





















