ವಿಭಜನೆಯ ಬಳಿಕ ಮೊದಲ ಬಾರಿಗೆ ಲಾಹೋರ್ ವಿವಿಯಲ್ಲಿ ಸಂಸ್ಕೃತ ಪೂರ್ಣ ಪ್ರಮಾಣದ ಕೋರ್ಸ್ ಆರಂಭ
ಇಸ್ಲಾಮಾಬಾದ್: ಭಾರತ–ಪಾಕಿಸ್ತಾನ ವಿಭಜನೆಯ ನಂತರ ದಶಕಗಳ ಕಾಲ ಮೌನವಾಗಿದ್ದ ಸಾಂಸ್ಕೃತಿಕ ಅಧ್ಯಾಯವೊಂದಕ್ಕೆ ಪಾಕಿಸ್ತಾನದಲ್ಲಿ ಹೊಸ ಚೈತನ್ಯ ದೊರಕಿದೆ. ಲಾಹೋರ್‌ನ ಪ್ರತಿಷ್ಠಿತ ಲಾಹೋರ್ ಮ್ಯಾನೇಜ್ಮೆಂಟ್ ಸೈನ್ಸಸ್ ವಿಶ್ವವಿದ್ಯಾಲಯ (LUMS) ಇದೀಗ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸುವ ನಾಲ್ಕು ಕ್ರೆಡಿಟ್‌ಗಳ ಪೂರ್ಣ ಪ್ರಮಾಣದ ಕೋರ್ಸ್ ಆರಂಭಿಸುವ ಮೂಲಕ ಗಮನ ಸೆಳೆದಿದೆ.
1947ರ ಬಳಿಕ ಪಾಕಿಸ್ತಾನದ ವಿಶ್ವವಿದ್ಯಾಲಯವೊಂದರಲ್ಲಿ ಸಂಸ್ಕೃತವನ್ನು ಶೈಕ್ಷಣಿಕ ಪಠ್ಯಕ್ರಮವಾಗಿ ಪರಿಚಯಿಸಲಾಗುತ್ತಿರುವುದು ಇದೇ ಮೊದಲ ಬಾರಿ ಎಂಬುದು ವಿಶೇಷ. ಈ ಕೋರ್ಸ್‌ನಲ್ಲಿ ಭಗವದ್ಗೀತೆ ಶ್ಲೋಕಗಳು, ಮಹಾಭಾರತದ ಆಯ್ದ ಭಾಗಗಳು, ಸಂಸ್ಕೃತ ಭಾಷೆಯ ಮೂಲ ವ್ಯಾಕರಣ ಹಾಗೂ ತತ್ವಶಾಸ್ತ್ರೀಯ ಅಂಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ.
ಇದಕ್ಕೂ ಮುನ್ನ ಮೂರು ತಿಂಗಳ ಹಿಂದೆ ವಿಶ್ವವಿದ್ಯಾಲಯವು ವಾರಾಂತ್ಯದ ಸಂಸ್ಕೃತ ಕಾರ್ಯಾಗಾರವನ್ನು ಆಯೋಜಿಸಿತ್ತು. ಆ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಇದೀಗ ಸಂಪೂರ್ಣ ಶೈಕ್ಷಣಿಕ ಕೋರ್ಸ್ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: 2027ರ ದೇಶವ್ಯಾಪಿ ಡಿಜಿಟಲ್ ಜನಗಣತಿಗೆ ಕೇಂದ್ರ ಮಂಜೂರು
ವಿಶ್ವವಿದ್ಯಾಲಯದ ಗುರ್ಮಾನಿ ಕೇಂದ್ರದ ನಿರ್ದೇಶಕ ಡಾ. ಅಲಿ ಉಸ್ಮಾನ್ ಕಾಸ್ಮಿ ಮಾತನಾಡಿ ಪಂಜಾಬ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಅನೇಕ ಅಮೂಲ್ಯ ಸಂಸ್ಕೃತದ ಪ್ರಾಚೀನ ಹಸ್ತಪ್ರತಿಗಳು ಮತ್ತು ದಾಖಲೆಗಳು ಸಂರಕ್ಷಿತವಾಗಿವೆ. ಆದರೆ 1947ರ ವಿಭಜನೆಯ ನಂತರ ಅವುಗಳ ಕುರಿತು ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಸಂಶೋಧನೆ ನಡೆಯಲಿಲ್ಲ. ವಿದೇಶಿ ಸಂಶೋಧಕರು ಮಾತ್ರ ಅವುಗಳನ್ನು ಅಧ್ಯಯನ ಮಾಡುತ್ತಿದ್ದರು. ಇದೀಗ ಆ ಅಮೂಲ್ಯ ದಾಖಲೆಗಳನ್ನು ಲಾಹೋರ್ ವಿಶ್ವವಿದ್ಯಾಲಯಕ್ಕೆ ತರಿಸಿ ಅಧ್ಯಯನಕ್ಕೆ ಬಳಸುವ ಯೋಜನೆ ಹೊಂದಿದ್ದೇವೆ ಎಂದು ತಿಳಿಸಿದರು.
ಈ ಮಹತ್ವದ ಶೈಕ್ಷಣಿಕ ಬದಲಾವಣೆಗೆ ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನ ಸಮಾಜಶಾಸ್ತ್ರದ ಅಸೋಸಿಯೇಟ್ ಪ್ರೊಫೆಸರ್ ಡಾ. ಶಾಹಿದ್ ರಶೀದ್ ಅವರ ಪ್ರಯತ್ನಗಳು ಪ್ರಮುಖ ಕಾರಣವಾಗಿವೆ. ಸಂಸ್ಕೃತ ಕಲಿಕೆಯನ್ನು ಸಮರ್ಥಿಸಿಕೊಂಡ ಅವರು, ಸಂಸ್ಕೃತವು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ಭಾಷೆಯಲ್ಲ. ಮಹಾನ್ ವ್ಯಾಕರಣಜ್ಞ ಪಾಣಿನಿಯ ಗ್ರಾಮ ಈ ಪ್ರದೇಶದಲ್ಲೇ ಇತ್ತು.
ಸಿಂಧೂ ಕಣಿವೆ ನಾಗರಿಕತೆಯ ಕಾಲದಲ್ಲೇ ಇಲ್ಲಿ ಬರವಣಿಗೆ ಸಂಸ್ಕೃತಿ ಬೆಳೆಯಿತು. ಸಂಸ್ಕೃತವು ಒಂದು ಮಹತ್ತರ ಸಾಂಸ್ಕೃತಿಕ ಪರ್ವತದಂತಿದ್ದು, ಅದನ್ನು ಉಳಿಸಿ ಅಧ್ಯಯನ ಮಾಡುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವನ್ಯಜೀವಿಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಹೆದ್ದಾರಿಗೆ ಟೇಬಲ್‌ಟಾಪ್
ವಿಶ್ವವಿದ್ಯಾಲಯದ ಅಧಿಕಾರಿಗಳ ಪ್ರಕಾರ, ಈ ಕೋರ್ಸ್ ಮೂಲಕ ದಕ್ಷಿಣ ಏಷ್ಯಾದ ತತ್ವಶಾಸ್ತ್ರ, ಸಾಹಿತ್ಯ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಲಿದೆ. ಭಾರತ ಮತ್ತು ಪಾಕಿಸ್ತಾನ ಹೊಂದಿರುವ ಸಾಮಾನ್ಯ ಸಾಂಸ್ಕೃತಿಕ ಪರಂಪರೆಯೊಂದಿಗೆ ಮರು ಸಂಪರ್ಕ ಸಾಧಿಸುವ ದಿಕ್ಕಿನಲ್ಲಿ ಈ ಕ್ರಮವನ್ನು ಒಂದು ಐತಿಹಾಸಿಕ ಹಾಗೂ ಧೈರ್ಯಶಾಲಿ ಹೆಜ್ಜೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.





















