Home ನಮ್ಮ ಜಿಲ್ಲೆ ಬೆಂಗಳೂರು ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ – ಸ್ಕೂಟರ್ ಸವಾರ ಸಾವು

ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ – ಸ್ಕೂಟರ್ ಸವಾರ ಸಾವು

0
9

ಬೆಂಗಳೂರು: ಮಾಗಡಿ ತಾಲ್ಲೂಕಿನ ಗುಡೇಮಾರನಹಳ್ಳಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಷಾದನೀಯ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಅವರ ಪುತ್ರ ಆರ್. ಶಶಾಂಕ್ ಅವರಿಗೆ ಸೇರಿದ ಕಾರು ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಮೃತರು ಬೆಳಗುಂಬ ಗ್ರಾಮದ ರಾಜೇಶ್ (27). ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಗುರುವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ದಾರುಣ ಘಟನೆ ನಡೆದಿದೆ.

ಶಶಾಂಕ್ ಇದ್ದ ಕಾರು ಮಾಗಡಿಯಿಂದ ಬೆಂಗಳೂರಿನತ್ತ ಬರುತ್ತಿದ್ದಾಗ, ಮನೆಗೆ ವಾಪಸ್ಸಾಗುತ್ತಿದ್ದ ರಾಜೇಶ್ ಅವರ ಸ್ಕೂಟರ್‌ಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಾಜೇಶ್ ಗಂಭೀರವಾಗಿ ಗಾಯಗೊಂಡು ಘಟನಾ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಘಟನೆ ನಡೆದ ನಂತರ, ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಶವವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ.

ಈ ವಿಚಾರವಾಗಿ ಸಚಿವ ಹೆಚ್ಎಂ ರೇವಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದು, ನನ್ನ ಮಗನ ಕಾರು ಅಪಘಾತ ಆಗಿರುವುದು ನಿಜ. ಕಾರು ಓಡಿಸುತ್ತಿದ್ದದ್ದು ನನ್ನ ಮಗ ಅಲ್ಲ, ಡ್ರೈವರ್. ಓವರ್ಟೇಕ್ ಮಾಡುವಾಗ ಈ ಅಪಘಾತ ಆಗಿದೆ. ಮೃತ ಯುವಕನ ಕುಟುಂಬಸ್ಥರು ನನಗೆ ಪರಿಚಯ, ಕುಟುಂಬದವರ ಜೊತೆಗೆ ನಾನು ಮಾತನಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅಪಘಾತ ನಡೆದಾಗ ಶಶಾಂಕ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಮೃತ ರಾಜೇಶ್ ಕಡೆಯವರು ದೂರಿದ್ದಾರೆ.