ತಮಿಳುನಾಡು : ಒಂದೇ ದಿನ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಮೂರು ದೊಡ್ಡ ಸಂಭ್ರಮದ ಕ್ಷಣಗಳು ಲಭಿಸಿವೆ. ಮೊದಲನೆಯದು ಇಂದು ರಜನಿಕಾಂತ್ ಅವರ 75ನೇ ಜನ್ಮದಿನವಾಗಿದೆ. ಎರಡನೆಯದು ರಜನಿಕಾಂತ್ ಅವರ ಸಿನಿ ಪ್ರವೇಶಕ್ಕೆ 50 ವರ್ಷಗಳ ಪೂರೈಕೆ ಆಗಿದೆ ಅಲ್ಲದೆ ಮೂರನೆಯದಾಗಿ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿರುವ ‘ಪಡೈಯಪ್ಪ’ ಚಿತ್ರದ ಮರು ಬಿಡುಗಡೆಯಾಗಿದೆ
‘ಪಡೈಯಪ್ಪ’ ಸಿನಿಮಾ ಇಂದು 4K ಮರು ಬಿಡುಗಡೆಯಾಗಿ ಮೂಡಿಬಂದ ಸಂಭ್ರಮ: ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಅವರು ಘೋಷಿಸಿದಂತೆ, 1999ರ ಏಪ್ರಿಲ್ 10 ರಂದು ಬಿಡುಗಡೆಯಾದ ಐಕಾನಿಕ್ ‘ಪಡೈಯಪ್ಪ’ ಸಿನಿಮಾ ಇಂದು (ಡಿಸೆಂಬರ್ 12) 4K ರೆಸ್ಟೋರೇಷನ್ ಮತ್ತು ಅತ್ಯಾಧುನಿಕ ಸೌಂಡ್ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಯಾಗಿದೆ.
ಈ ಸಿನಿಮಾ ತನ್ನ ಕಾಲದಲ್ಲಿ ತಮಿಳುನಾಡು ಸೇರಿ ದೇಶದ ಅನೇಕ ಕಡೆಗಳಲ್ಲಿ 150ಕ್ಕೂ ಹೆಚ್ಚು ದಿನಗಳ ಯಶಸ್ವಿ ಪ್ರದರ್ಶನ ನೀಡಿ ಬ್ಲಾಕ್‌ಬಸ್ಟರ್ ಅಲೆ ಎಬ್ಬಿಸಿತ್ತು. ಇಂದು ಮರುಬಿಡುಗಡೆಯಾದ ನಂತರ, ತಲೆಮಾರುಗಳನ್ನು ಮೋಡಿ ಮಾಡಿದ ತಲೈವರ್ ಅವರ ಮಿಂಚು ಮತ್ತೆ ಅಭಿಮಾನಿಗಳ ಕಣ್ಮುಂದೆ ಜೀವಂತವಾಗಿದೆ. ‘ಪಡೈಯಪ್ಪ’ ರಜನಿಕಾಂತ್‌ನ ಶೈಲಿ, ಡೈಲಾಗ್ ಡೆಲಿವರಿ ಮತ್ತು ಮ್ಯಾಸ್ ಪ್ರೆಸೆನ್ಸ್‌ಗೆ ಇನ್ನೊಂದು ಮೈಲುಗಲ್ಲು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಶೇಷ ಶುಭಾಶಯ: ರಜನಿಕಾಂತ್ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಶುಭ ಹಾರೈಸಿ, ಅವರನ್ನು ಹಲವು ತಲೆಮಾರುಗಳನ್ನು ಆಕರ್ಷಿಸಿದ ನಟ ಎಂದು ಕೊಂಡಾಡಿದ್ದಾರೆ. ಮೋದಿ ಅವರು ತಮ್ಮ ಸಂದೇಶದಲ್ಲಿ “ರಜನಿಕಾಂತ್ ಅವರ ಅಭಿನಯ ಶೈಲಿ ಮತ್ತು ಚಿತ್ರಗಳು ವ್ಯಾಪಕ ಮೆಚ್ಚುಗೆಯನ್ನು ಪಡೆದಿವೆ. ಅವರ 50 ವರ್ಷಗಳ ಸಿನಿ ಸಾಧನೆಯು ಭಾರತೀಯ ಚಲನಚಿತ್ರ ಲೋಕಕ್ಕೆ ಹೊಸ ಮಾನದಂಡಗಳನ್ನು ತಂದಿದೆ. ದೀರ್ಘ ಹಾಗೂ ಆರೋಗ್ಯಕರ ಜೀವನ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಅಭಿಮಾನಿಗಳ ಸಂಭ್ರಮ: ರಜನಿಕಾಂತ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಕೇಕ್ ಕಟಿಂಗ್, ರಕ್ತದಾನ ಶಿಬಿರಗಳು, ‘ಪಡೈಯಪ್ಪ’ ಮರು ಬಿಡುಗಡೆ ಶೋಗಳ ಮೂಲಕ ಭಭ್ರವಾಗಿ ಆಚರಿಸುತ್ತಿದ್ದಾರೆ. ತಮಿಳು ಚಲನಚಿತ್ರ ಲೋಕಕ್ಕೆ ರಜನಿಕಾಂತ್ ತಂದ ಮ್ಯಾಜಿಕ್, ಶೈಲಿ ಮತ್ತು ಹೃದಯ ಗೆಲ್ಲುವ ಮಾನವೀಯತೆ ಅವರನ್ನೇ ಒಂದು ದಂತಕಥೆಯನ್ನಾಗಿ ರೂಪಿಸಿದೆ.























