ಹುಬ್ಬಳ್ಳಿ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಕ್ರಿಕೆಟ್ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉತ್ಸುಕರಾಗಿದ್ದಾರೆ. ಬೆಳಗಾವಿಗೆ ತೆರಳಿ ಅವರನ್ನು ಭೇಟಿ ಮಾಡಿದ ವೇಳೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ ಪ್ರಸಾದ ಹೇಳಿದರು.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗುರುವಾರ ನಡೆಸಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಪ್ರಕಟಿಸಲಿದೆ. ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಿಂದ ಸಂಭ್ರಮ ಕಳೆದುಕೊಂಡಿದ್ದ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೆ ಮೆರಗು ಬರಲಿದೆ ಎಂದರು.
ಈ ಹಿಂದೆ ಕೆಎಸ್‌ಸಿಎ ಹಳೆ ಸಮಿತಿ ಏನು ಮಾಡಿದೆ ಎಂದು ನಾವು ಹೇಳುವುದಿಲ್ಲ. ನಾವು ಏನು ಮಾಡಲಿದ್ದೇವೆ ಎಂಬುದನ್ನು ತಿಳಿಸುತ್ತೇವೆ. ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಧಾರವಾಡ ವಲಯದಲ್ಲಿರುವ ಕ್ರೀಡಾಂಗಣಗಳ ಅಭಿವೃದ್ಧಿಗೆ ಒತ್ತು ನೀಡುತ್ತೇವೆ. ಈ ಭಾಗದಲ್ಲಿ ಕ್ರಿಕೆಟ್‌ನ್ನು ಬೆಳೆಸುವ ಉತ್ಸಾಹ ನಮ್ಮಲ್ಲಿದೆ. ನಾವು ಸದ್ಯದಲ್ಲಿ ಕ್ರಿಕೆಟ್ ಆಡಿಸುವ ಬಗ್ಗೆ ತಲೆಕೆಡಿಸಿಕೊಂಡಿದ್ದೇವೆ. ಹುಬ್ಬಳ್ಳಿ ಮತ್ತು ಬೆಳಗಾವಿ ಕೆಎಸ್‌ಸಿಎ ಮೈದಾನದ ಯೋಜನಾ ವರದಿ ಕೊಡಲು ಹೇಳಿದ್ದೇವೆ ಎಂದರು.























